ಬೆಂಗಳೂರು; ಕರ್ನಾಟಕದಲ್ಲಿನ 5, 8, 9, 11ನೇ ತರಗತಿಗಳ ಬೋರ್ಡ್ ಪರೀಕ್ಷೆ ವಿವಾದಕ್ಕೆ ಹಠಾತ್ ತಿರುವು ಸಿಕ್ಕಿದೆ. ಬುಧವಾರವಷ್ಟೇ ಬೋರ್ಡ್ ಪರೀಕ್ಷೆಗಯನ್ನು ಹೈಕೋರ್ಟ್ ರದ್ದು ಮಾಡಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ವಿಭಾಗೀಯ ಪೀಠ ಇಂದು ಮಹತ್ವದ ಆದೇಶ ಪ್ರಕಟಿಸಿದ್ದು, ಬೋರ್ಡ್ ಪರೀಕ್ಷೆಗಳಿಗೆ ಅನುಮತಿ ನೀಡಿದೆ.
ಕರ್ನಾಟಕದ ಎಲ್ಲ ಶಾಲೆಗಳ 5,8,9ನೇ ತರಗತಿಗಳ ಬೋರ್ಡ್ ಪರೀಕ್ಷೆ ರದ್ದು ಮಾಡಿದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿರುವ ವಿಭಾಗೀಯ ಪೀಠವು ಇಂದು, ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿದೆ.
2023-24ನೇ ಸಾಲಿನಿಂದ 5,8,9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅನುದಾನ ರಹಿತ ಶಾಲೆಗಳ ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಬುಧವಾರ ಬೋರ್ಡ್ ಪರೀಕ್ಷೆಯನ್ನು ರದ್ದುಪಡಿಸಿ ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು, ಖಾಸಗಿ ಶಾಲೆಗಳಿಂದಷ್ಟೇ ಬೋರ್ಡ್ ಪರೀಕ್ಷೆಗೆ ತಕರಾರಿದೆ. ಪೋಷಕರಾಗಲೀ, ಮಕ್ಕಳಾಗಲೀ ಬೋರ್ಡ್ ಪರೀಕ್ಷೆಗೆ ಆಕ್ಷೇಪಿಸಿಲ್ಲ ಎಂದು ಹೈಕೋರ್ಟ್‌ನ ವಿಭಾಗಿಯ ಪೀಠದ ಮುಂದೆ ವಾದ ಮಂಡಿಸಿದೆ. ಬೋರ್ಡ್ ಪರೀಕ್ಷೆಯಿಂದ ಖಾಸಗಿ ಶಾಲೆಗಳ ಮೌಲ್ಯಮಾಪನವಾಗಲಿದೆ ಎಂದೂ ಸರ್ಕಾರ ಅಭಿಪ್ರಾಯ ಪಟ್ಟಿದೆ. ವಾದವನ್ನು ಆಲಿಸಿದ ವಿಭಾಗೀಯ ಪೀಠ ಬೋರ್ಡ್ ಪರೀಕ್ಷೆಗೆ ಗ್ರೀನ್ ಸಿಗ್ನಲ್ ನೀಡಿತು.