ಬೆಂಗಳೂರು: ಮೈಕ್ರೋ ಫೈನಾನ್ಸಿಂಗ್ ಸಂಸ್ಥೆಗಳ (MFI) ಹಾವಳಿ ನಿಯಂತ್ರಿಸುವ ಅಸ್ತ್ರಕ್ಕೆ ರಾಜ್ಯಪಾಲರು ಅಸ್ತು ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಬುಧವಾರ ಅನುಮೋದನೆ ನೀಡಿದ್ದಾರೆ.
ರಾಜ್ಯಪಾಲರು ಕೋರಿದ ವಿವರಣೆಯೊಂದಿಗೆ ಮೈಕ್ರೋಫೈನಾನ್ಸ್‌ಗೆ ಸಂಬಂಧಿಸಿದ ಸುಗ್ರೀವಾಜ್ಞೆಯನ್ನು ಸರ್ಕಾರ ರಾಜಭವನಕ್ಕೆ ಕಳುಹಿಸಿದೆ. “ಈಗ, ರಾಜ್ಯಪಾಲರು ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ” ಎಂದು ಮುಖ್ಯಮಂತ್ರಿಗಳ ಕಚೇರಿ (CMO) ತಿಳಿಸಿದೆ.
ಇದರೊಂದಿಗೆ, ಕರ್ನಾಟಕ ಮೈಕ್ರೋ ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ತಡೆಗಟ್ಟುವಿಕೆ) ಸುಗ್ರೀವಾಜ್ಞೆ, 2025 ಜಾರಿಗೆ ಬರಲಿದೆ. ಈ ಸಂಬಂಧ ವಿವರಗಳನ್ನು ಇನ್ನೂ ಅಧಿಕೃತಗೊಳಿಸಬೇಕಾಗಿದೆ. ಆದಾಗ್ಯೂ, ಮೈಕ್ರೋಫೈನಾನ್ಸಿಂಗ್ ಪಿಡುಗನ್ನು ನಿಭಾಯಿಸುವಲ್ಲಿ ಕಾನೂನು ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ನೋಡಬೇಕಾಗಿದೆ.
ಈ ಹಿಂದೆ ಸುಗ್ರೀವಾಜ್ಞೆಯನ್ನು ತಿರಸ್ಕರಿಸಿ ಸರ್ಕಾರಕ್ಕೆ ಹಿಂದಿರುಗಿಸಿದ್ದ ರಾಜ್ಯಪಾಲರು 10 ವರ್ಷಗಳ ಶಿಕ್ಷೆ ಮತ್ತು 5 ಲಕ್ಷ ರೂ. ದಂಡವು “ಅತಿಯಾದ” ಕ್ರಮ ಎಂದು ಪ್ರತಿಪಾದಿಸಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬಳಸಬಹುದಿತ್ತು ಎಂದಿದ್ದ ರಾಜ್ಯಪಾಲರು, ಈ ಸುಗ್ರೀವಾಜ್ಞೆಯು ಕಿರುಬಂಡವಾಳ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ, ಇದು ಬಡವರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಸಣ್ಣಪುಟ್ಟ ಬದಲಾವಣೆಗೆ ರಾಜ್ಯಪಾಲರು ಸೂಚಿಸಿದ್ದರು. ಅದರಂತೆ ಕೆಲವು ನಿಯಮಗಳನ್ನು ಬದಲಾಯಿಸಿ ಸರ್ಕಾರ ಕಳುಹಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.