ಕುಟುಂಬ ರಾಜಕಾರಣಕ್ಕೆ ಬಿಜೆಪಿ ಹೈಕಮಾಂಡ್ ಬ್ರೇಕ್.. ಒಂದು ಕುಂಟುಂಬಕ್ಕೆ ಒಂದೇ ಟಿಕೆಟ್..? ಬಿಎಸ್‌ವೈ, ಶೆಟ್ಟರ್, ಜಾರಕಿಹೊಳಿ, ಕತ್ತಿ ಅಷ್ಟೇ ಅಲ್ಲ, ಲಿಂಬಾವಳಿ, ತೇಜಸ್ವಿ ಭವಿಷ್ಯಕ್ಕೂ ಆತಂಕ..
ಬೆಂಗಳೂರು: ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ಎಂಬ ಸೂತ್ರವನ್ನು ಪರಿಪೂರ್ಣವಾಗಿ ಅನುಸರಿದ ಬಿಜೆಪಿ ರಾಷ್ಟ್ರ ರಾಜಕಾರಣದಲ್ಲಿ ಹೊಸ ಆಯಾಮಕ್ಕೂ ಬಾಷ್ಯ ಬರೆದಿತ್ತು. ಇದೇ ಸೂತ್ರವನ್ನು ಕಾಂಗ್ರೆಸ್ ಸಹಿತ ಹಲವು ಪಕ್ಷಗಳು ಅನುಸರಿಸುತ್ತಿದೆ. ಕಾಂಗ್ರೆಸ್‌ನಲ್ಲಿ ಒಂದೇ ಕುಟುಂಬದಲ್ಲಿ ಅಧಿಕಾರ ಕೇಂದ್ರೀಕೃತವಾಗಿದ್ದನ್ನು ಬೊಟ್ಟು ಮಾಡುತ್ತಿದ್ದ ಬಿಜೆಪಿಗೆ ಈ ‘ಒಂದೇ…’ ಸೂತ್ರವನ್ನು ಕೊಟ್ಟಿರುವುದು ಸಂಘ. ಇದೀಗ ‘ಒಂದು ಕುಟುಂಬಕ್ಕೆ ಒಬ್ಬನೇ ಲಾ ಮೇಕರ್’ ಎಂಬ ಸೂತ್ರ ಅನುಸರಿಸುವ ಪ್ರಕ್ರಿಯೆಗೂ ಕೇಸರಿ ಪಾಳಯ ಮುನ್ನುಡಿ ಬರೆದಿದೆ. ಇದು ಕರ್ನಾಟಕದಿಂದಲೇ ಆರಂಭವಾಗಿರುವುದು ವಿಶೇಷ.
ಪ್ರಸ್ತುತ ಉಪಚುನಾವಣೆ ಸಂದರ್ಭದಲ್ಲಿ ಈ ಸೂತ್ರ ಅನುಸರಿಸುವ ಮೂಲಕ ಬಿಜೆಪಿ ಪಕ್ಷದೊಳಗೆ ಸಂಚಲನ ಸೃಷ್ಟಿಯಾಗಿದೆ.
ಬಿಎಸ್‌ವೈ-ಯತ್ನಾಳ್ ಕಾರಣ..?
ರಾಜ್ಯದ ಉಪಚುನಾವಣೆಯಲ್ಲಿ ಸಿಎಂ ಯಡಿಯೂರಪ್ಪ ಅವರು ತಮ್ಮ ಪುತ್ರ ವಿಜಯೇಂದ್ರಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದರು. ಅದಕ್ಕೂ ಮುನ್ನ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆಗಳ ಮಾತುಗಳು ಕೇಳಿಬಂದಾಗ ತಮ್ಮ ಪುತ್ರ ವಿಜಯೇಂದ್ರರಿಗೆ ಟಿಕೆಟ್ ನೀಡಿ ವಿಧಾನಸಭೆ ಅಥವಾ ವಿಧಾನ ಪರಿಷತ್‌ಗೆ ಆಯ್ಕೆ ಮಾಡಬೇಕೆಂಬ ಷರತ್ತು ಮುಂದಿಡಲಾಗಿತ್ತು. ಆದರೆ ಅದೇ ಹೊತ್ತಿಗಾಗಲೇ ಕುಟುಂಬ ರಾಜಕಾರಣದ ಆರೋಪ ಬಿಜೆಪಿ ವರಿಷ್ಠರನ್ನೇ ಮುಜುಗರಕ್ಕೀಡು ಮಾಡಿತು. ಅಷ್ಟೇ ಅಲ್ಲ ಬಿಜೆಪಿಯ ಫೈರ್ ಬ್ರಾಡ್ ಶಾಸಕ ಬಸನಗೌಡ ಪಟೀಲ್ ಯತ್ನಾಳ್ ಅವರಂತೂ ಬಿಎಸ್‌ವೈ ಹಾಗೂ ವಿಜಯೇಂದ್ರ ವಿರುದ್ದ ಪ್ರಯೋಗಿಸಿದ ಅಸ್ತ್ರ ಸರಿಯಾಗಿದೆ ಎಂಬುದು ಹೈಕಮಾಂಡ್‌ಗೂ ಮನವರಿಕೆಯಾಯಿತು ಎನ್ನಲಾಗಿದೆ. ಈ ಕಾರಣದಿಂದಾಗಿಯೇ ಈ ಬಾರಿ ಉಪಚುನಾವಣಾ ಸಂದರ್ಭದಲ್ಲಿ ಹೊಸ ಸಂಪ್ರದಾಯದ ಹಾದಿಯನ್ನು ಬಿಜೆಪಿ ಅನುಸರಿಸಿದೆ.
ರಾಜ್ಯ ಬಿಜೆಪಿಯಲ್ಲಿ ಮುಂದೇನು..?
ಬೆಜೆಪಿಯ ಈ ಸೂತ್ರ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕುಟುಂಬಕ್ಕೆ ಹಿನ್ನಡೆಯಾಗುವಂತೆ ಮಾಡಿದೆ. ಈ ಸೂತ್ರದ ಮೊದಲ ಪ್ರಯೋಗದಲ್ಲಿ ಈ ಇಬ್ಬರೂ ನಾಯಕರಿಗೆ ಆಶಾಭಂಗವಾಗಿದೆ. ಬಸವಕಲ್ಯಾಣದಲ್ಲಿ ಬಿಎಸ್‌ವೈ ಪುತ್ರ ವಿಜಯೇಂದ್ರ ಸ್ಪರ್ದಿಸಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಅದರೆ ವರಿಷ್ಠರ ನಿರ್ಧಾರ ಬೇರೆಯೇ ಆಯಿತು. ಅತ್ತ ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಪುತ್ರಿಗೆ (ಶೆಟ್ಟರ್ ಸೊಸೆ) ಟಿಕೆಟ್ ಸಿಗುವ ಸಾಧ್ಯತೆಗಳ ಬಗ್ಗೆ ಮಾತುಗಳು ಕೇಳಿಬಂದವು. ಒಂದು ವೇಳೆ ಈ ರೀತಿ ಆಯ್ಕೆ ನಡೆದಿದ್ದಲ್ಲಿ ಬಿಜೆಪಿಯ ಹೊಸ ಸೂತ್ರಕ್ಕೆ ಅಡ್ಡಿಯಾಗಬಹುದೆಂಬುದನ್ನು ಮನಗಂಡ ಹೈಕಮಾಂಡ್ ಅಂಗಡಿ ಪುತ್ರಿಗೆ ಟಿಕೆಟ್ ನೀಡುವ ಬದಲು ಅಂಗಡಿ ಪತ್ನಿಗೆ ಸ್ಪರ್ದೆಯ ಅವಕಾಶ ನೀಡಿದೆ ಎಂದು ಹೇಳಲಾಗುತ್ತಿದೆ.
ಇನ್ಯಾರಿಗೆಲ್ಲಾ ಕೊಕ್..?
ಕ್ರಿಯಾಶೀಲ ಸೂತ್ರಗಳನ್ನು ಪರಿಚಯಿಸುತ್ತಿರುವ ಬಿಜೆಪಿ ಇದೀಗ ‘ಕುಟುಂಬ ರಾಜಕಾರಣ’ ಆರೋಪದಿಂದ ಹೊರ ಬರಲು ಪ್ರಯತ್ನಿಸುತ್ತಿದೆ ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಇನ್ನೆಷ್ಟು ಮಂದಿಗೆ ಆಶಾಭಂಗವಾಗಬಹುದು ಎಂಬುದೇ ಮುಂದಿರುವ ಆತಂಕ.
ಬೆಂಗಳೂರು ವಿಧಾನಸಭಾ ಕ್ಷೇತ್ರವನ್ನು ಈ ವರೆಗೂ ರವಿಸುಬ್ರಹ್ಮಣ್ಯ ಪ್ರತಿನಿಧಿಸುತ್ತಿದ್ದು ಅವರ ಸೋದರ ಸಂಬಂಧಿ ತೇಜಸ್ವಿ ಸೂರ್ಯ ಪ್ರಸಕ್ತ ಬೆಂಗಳೂರು ದಕ್ಷಿಣದ ಸಂಸದರು. ಇವರಿಬ್ಬರಲ್ಲಿ ಯಾರು ಸ್ಥಾನ ಉಳಿಸಿಕೊಳ್ಳುವರೆಂಬುದು ಕುತೂಹಲ. ಅತ್ತ ಗುಲ್ಬರ್ಗಾ ಜಿಲ್ಲೆಯಲ್ಲಿ ಉಮೇಶ್ ಜಾದವ್ ಸಂಸದರಾಗಿದ್ದರೆ ಅವರ ಪುತ್ರ ಅವಿನಾಶ್ ಶಾಸಕರು. ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ್ ಅವರಿಲು ಶಾಸಕರಾಗಿದ್ದರೆ ಅವರ ಸಹೋದರ ಪ್ರದೀಪ್ ಶೆಟ್ಟರ್ ವಿಧಾನಪರಿಷತ್ ಸದಸ್ಯರು. ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬದ ಸದಸ್ಯರಾದ ರಮೇಶ್ ಮತ್ತು ಬಾಲಚಂದ್ರ ಪೈಕಿ ಯಾರಿಗೆ ಸಿಗಲಿದೆ ಚಾನ್ಸ್ ಎಂಬುದೂ ಕೌತುಕ. ಟಿಕೆಟ್‌ಗಾಗಿ ಸರ್ಕಸ್ ನಡೆಸುತ್ತಲೇ ಬಂದಿರುವ ಉಮೇಶ್ ಕತ್ತಿ, ರಮೇಶ್ ಕತ್ತಿ ಸಹೋದರರದ್ದೂ ಇದೇ ಸ್ಥಿತಿ. ಶಾಸಕ ರಘು ಮತ್ತು ಅರವಿಂದ ಲಿಂಬಾವಳಿ ಇಬ್ಬರು ಕೂಡ ಸಂಬಂಧದಲ್ಲಿ ಭಾವಮೈದುನ.
ಶಾಸಕ ಸಿ.ಎಂ.ಉದಾಸಿ ಮತ್ತು ಪುತ್ರ ಸಂಸದ ಶಿವಕುಮಾರ್ ಉದಾಸಿ, ಶ್ರೀರಾಮುಲು ಸಹೋದರಿ ಶಾಂತಾ ಮತ್ತು ಅವರ ಚಿಕ್ಕಪ್ಪ ಸಣ್ಣ ಪಕೀರಪ್ಪ ಕೂಡ ಒಂದೇ ಪರಿವಾರದ ಸದಸ್ಯರು. ಸೋಮಶೇಖರ ರೆಡ್ಡಿ, ಕರುಣಾಕರ್ ರೆಡ್ಡಿ ಸಹೋದರರಿಗೂ ಈ ಸೂತ್ರದಿಂದಾಗಿ ಆತಂಕ ಎದುರಾಗಲಿದೆ.
ಬಿಎಸ್‌ವೈ ಕುಟುಂಬಕ್ಕೆ ಆತಂಕ
ಬಿಜೆಪಿಯಲ್ಲಿನ ಪರಿಸ್ಥಿತಿ ಹೀಗಿರುವಾಗ ಯಡಿಯೂರಪ್ಪ ಕುಟುಂಬದಲ್ಲಿ ಮುಂದೆ ರಾಘವೇಂದ್ರ, ವಿಜಯೇಂದ್ರ ಪೈಕಿ ‘ಲಾ ಮೇಕರ್’ ಆಗಿ ಉಳಿಯಿವವರು ಯಾರು? ಬಿಎಸ್‌ವೈ ಅವರ ಸಂಬಂಧಿಯಂತಿರುವ ಸಂತೋಷ್‌ಗೆ ಟಿಕೆಟ್ ಸಿಗಬಹುದೇ ಎಂದೂ ಬಿಜೆಪಿಯ ಗರಡಿಯಲ್ಲಿ ಪ್ರತಿಧ್ವನಿಸುತ್ತಿರುವ ಚರ್ಚೆ.