ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ, IRCTC ಮತ್ತು ಭಾರತೀಯ ರೈಲ್ವೇ ಇಲಾಖೆಯ ಸಹಯೋಗದೊಂದಿಗೆ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್ರಾಜ್ ಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ತೆರಳಲು ಅನುಕೂಲವಾಗುವಂತೆ ರಿಯಾಯ್ತಿ ದರದಲ್ಲಿ ಪ್ಯಾಕೇಜ್ ರೂಪಿಸಿ “ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ” ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿರುತ್ತದೆ. ಈ ಯೋಜನೆಯಡಿ ವಿಶೇಷ ರೈಲು 10 ಟ್ರಿಪ್ ಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಒಟ್ಟು 5917 ಯಾತ್ರಾರ್ಥಿಗಳು ಪ್ರಯಾಣಿಸಿರುತ್ತಾರೆ.
ಕಾಶಿ-ರಾಮೇಶ್ವರ ಕ್ಷೇತ್ರಗಳ ಬಗ್ಗೆ ಹಿಂದೂ ಪುರಾಣಗಳಲ್ಲಿ ಹೇಳುವಂತೆ ಹಾಗೂ ಉತ್ತರ ಭಾರತದ ಕೆಲವು ಭಾಗಗಳಲ್ಲಿ (ವಾರಣಾಸಿ ಒಳಗೊಂಡಂತೆ) ಪ್ರಸ್ತುತ ಬಿಸಿಲಿನ ವಾತಾವರಣವಿದ್ದು, ಈ ಯೋಜನೆಯಡಿ ವಯೋವೃದ್ದರು ಅಧಿಕ ಸಂಖ್ಯೆಯಲ್ಲಿ ಯಾತ್ರೆ ಕೈಗೊಳ್ಳುತ್ತಿರುವುದರಿಂದ, ಸದರಿ ಯಾತ್ರಾರ್ಥಿಗಳ ಆರೋಗ್ಯದ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾಪಿತ “ಕರ್ನಾಟಕ ಭಾರತ್ ಗೌರವ್” ಯೋಜನೆಯಡಿ ದಕ್ಷಿಣ ಭಾರತದಲ್ಲಿನ ಪುಣ್ಯ ಕ್ಷೇತ್ರಗಳಾದ ರಾಮೇಶ್ವರ-ಕನ್ಯಾಕುಮಾರಿ-ಮಧುರೆ-ತಿರುವನಂತಪುರ ಕ್ಷೇತ್ರಗಳಿಗೆ “ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ” ಪ್ರವಾಸವನ್ನು ಏರ್ಪಡಿಸಲು ಉದ್ದೇಶಿಸಲಾಗಿರುತ್ತದೆ ಎಂದು ಮುಜರಾಯಿ ಖಾತೆಯನ್ನೂ ಹೊಂದಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಈ ಪ್ರವಾಸವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ರೂಪಿಸಿದ್ದು, 03 ಟೈರ್ A/C ರೈಲಿನಲ್ಲಿ ಒಟ್ಟು 06 ದಿನಗಳ ಪ್ರವಾಸವಾಗಿರುತ್ತದೆ. ಈ ಪ್ರವಾಸದಲ್ಲಿ ತೆರಳುವ ಯಾತ್ರಾರ್ಥಿಗಳಿಗೆ ತಿಂಡಿ, ಊಟ, ವಸತಿ ಮತ್ತು ದರ್ಶನದ ವ್ಯವಸ್ಥೆಗಳು ಒಳಗೊಂಡಿರುತ್ತದೆ ಹಾಗೂ ಯಾತ್ರಾರ್ಥಿಗಳ ಆರೋಗ್ಯ ಮತ್ತು ಕ್ಷೇಮದ ದೃಷ್ಠಿಯಿಂದ ಅಗತ್ಯ ವೈದ್ಯಕೀಯ ವ್ಯವಸ್ಥೆಯನ್ನು ಸಹಾ ಒದಗಿಸಲಾಗುವುದು. ಈ ಪ್ಯಾಕೇಜ್ನ ಮೊತ್ತ ಒಟ್ಟು ರೂ.15,000/-ಗಳಾಗಿದ್ದು, ಇದರಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ರೂ.5,000/-ಗಳ ಸಹಾಯಧನವನ್ನು ನೀಡಲಾಗುವುದು ಹಾಗೂ ಯಾತ್ರೆಗೆ ತೆರಳುವ ಯಾತ್ರಾರ್ಥಿಯು ಕೇವಲ ರೂ.10,000/-ಗಳನ್ನು ಮಾತ್ರವೇ ಪಾವತಿಸಬೇಕಾಗಿರುತ್ತದೆ.
“ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ” ಮೂಲಕ ಪುಣ್ಯಕ್ಷೇತ್ರಗಳಿಗೆ ಯಾತ್ರೆಗೆ ತೆರಳಬಯಸುವವರು IRCTC ಪೋರ್ಟಲ್ https://www.irctctourism.com/ ಮೂಲಕ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು.
“ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ” ಯೋಜನೆಯಡಿ ವಿಶೇಷ ರೈಲಿನ ಪ್ರವಾಸವು ಈಗಾಗಲೇ 2 ಟ್ರಿಪ್ಪುಗಳನ್ನು ಪೂರೈಸಿದ್ದು, ಈ ಯೋಜನೆಯಡಿ ಒಟ್ಟು 1289 ಯಾತ್ರಾರ್ಥಿಗಳು ಯಾತ್ರೆ ಕೈಗೊಂಡಿರುತ್ತಾರೆ. ಪ್ರಸ್ತುತ 23.06.2024ರಂದು 3 ಟ್ರಿಪ್ ಪ್ರಾರಂಭವಾಗಿರುತ್ತದೆ. 4 ಟ್ರಿಪ್‌ನ್ನು 01.07.2024ಕ್ಕೆ ನಿಗದಿಪಡಿಸಿದ್ದು, ಈ ಟ್ರಿಪ್ನ ರೈಲಿನ ಎಲ್ಲಾ ಸೀಟುಗಳು ಈಗಾಗಲೇ ಬುಕ್ ಆಗಿರುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಈ ವಿಶೇಷ ರೈಲಿನ ಪ್ರವಾಸವು 11.07.2024 ರಿಂದ 16.07.2024 ರವರೆಗೆ ಹಾಗೂ 24.07.2024 ರಿಂದ 29.07.2024 ರವರೆಗೆ ಹೊರಡಲಿದ್ದು, ಬೆಳಗಾವಿ, ಹುಬ್ಬಳ್ಳಿ, , ಹಾವೇರಿ, ದಾವಣಗೆರೆ, ಬೀರೂರು, ತುಮಕೂರು ಮತ್ತು ಬೆಂಗಳೂರು ಮಾರ್ಗವಾಗಿ ಸಂಚರಿಸುತ್ತದೆ.