ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ಸಾರಿಗೆ ವ್ಯವಸ್ಥೆಗೆ ಮಾದರಿಯಂತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಇದೀಗ ದಕ್ಷಿಣ ಭಾರತದಲ್ಲಿ ಮತ್ತೊಂದು ಯಶೋಗಾಥೆಯತ್ತ ಮುಖ ಮಾಡಿದೆ. ಆಂದ್ರಪ್ರದೇಶ-ಕರ್ನಾಟಕ ನಡುವೆ ಕೆಎಸ್ಸಾರ್ಟಿಸಿ ನಿಗಮವು ಸಂಪರ್ಕ ಸೇತುವಾಗಿ ಹೆಗ್ಗುರುತಾಗುವ ನಿಟ್ಟಿನಲ್ಲಿ ಮಹತ್ವದ ಕಾರ್ಯಾಚರಣೆಗೆ ಮುನ್ನುಡಿ ಬರೆಯಲಾಗಿದೆ. ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ನಡುವಿನ ಅಂತರರಾಜ್ಯ ಸಾರಿಗೆ ಸಂಬಂಧ ವಿಜಯವಾಡದಲ್ಲಿ ನಡೆದ ಒಪ್ಪಂದವು ಉಭಯ ರಾಜ್ಯಗಳ ಸಾರಿಗೆ ವಲಯದಲ್ಲಿನ ಬಹುಕಾಲದ ಕನಸನ್ನು ನನಸಾಗಿಸಿದೆ. ಕೆಎಸ್ಸಾರ್ಟಿಸಿ ಎಂಡಿ ವಿ.ಅನ್ಬುಕುಮಾರ್ ಅವರ ನಡೆಯಿಂದಾಗಿ ರಾಜ್ಯದ ಸಾರಿಗೆ ನಿಗಮದ ಸೇವೆ ದಕ್ಷಿಣದ ಮತ್ತೊಂದು ರಾಜ್ಯದಲ್ಲಿ ಹೆಗ್ಗುರುತಾಗಲಿದೆ.
ಬರೋಬ್ಬರಿ 9 ಒಪ್ಪಂದಗಳ ಸಾರ್ಥಕ ನಡೆ..!
ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯಗಳ ನಡುವೆ ಇದುವರೆಗೆ ಒಂದು ಪ್ರಧಾನ ಅಂತರರಾಜ್ಯ ಸಾರಿಗೆ ಒಪ್ಪಂದ ಹಾಗೂ 8 ಪೂರಕ ಅಂತರರಾಜ್ಯ ಸಾರಿಗೆ ಒಪ್ಪಂದಗಳು ಏರ್ಪಟ್ಟಿವೆ.
ಕರ್ನಾಟಕ ಹಾಗೂ ಆಂಧ್ರ ಪ್ರದೇಶ ರಾಜ್ಯಗಳ ನಡುವಿನ ಈ ಹಿಂದಿನ ಅಂತರರಾಜ್ಯ ಸಾರಿಗೆ ಒಪ್ಪಂದ 2008ನೇ ಇಸವಿಯಲ್ಲಿ ಏರ್ಪಟ್ಟಿದೆ.
ಎರಡೂ ರಾಜ್ಯಗಳ ನಡುವೆ ಪ್ರಯಾಣಿಸುವ ಸಾರ್ವಜನಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದ್ದು ಸಾರ್ವಜನಿಕ ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲೆಂದು ಇಂದು (ಫೆ.2) ವಿಜಯವಾಡದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಹಾಗೂ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸಿ.ಹೆಚ್. ಡಿ. ತಿರುಮಲ ರಾವ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಕರ್ನಾಟಕ ಹಾಗೂ ಆಂಧ್ರ ಪ್ರದೇಶ ಸರ್ಕಾರಗಳು ಮಾಡಿಕೊಳ್ಳಬೇಕಾದ ಪ್ರಸ್ತಾಪಿತ 9ನೇ ಪೂರಕ ಅಂತರರಾಜ್ಯ ಸಾರಿಗೆ ಒಪ್ಪಂದಕ್ಕೆ ರಾಜ್ಯ ಸಾರಿಗೆ ಸಂಸ್ಥೆಗಳ ಮಾರ್ಗಗಳನ್ನು ಅಂತಿಮಗೊಳಿಸಿ ಅಂತಿಮ ಮುದ್ರೆ ಒತ್ತಿದ್ದಾರೆ.
ಎರಡೂ ರಾಜ್ಯಗಳ ಸರ್ಕಾರಗಳು ಒಪ್ಪಂದ ಮಾಡಿಕೊಂಡ ನಂತರ ಸದರಿ ಮಾರ್ಗಗಳಲ್ಲಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಬಹುದಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಸಂತಸ ಹಂಚಿಕೊಂಡಿದ್ದಾರೆ.
ಎರಡು ರಾಜ್ಯಗಳ ರಸ್ತೆ ಸಾರಿಗೆ ಒಪ್ಪಂದದ ಅನ್ವಯ ಪ್ರತಿನಿತ್ಯ ಹೆಚ್ಚುವರಿ ಬಸ್ಸುಗಳನ್ನು ಎರಡು ರಾಜ್ಯಗಳಲ್ಲಿ ಕಾರ್ಯಾಚರಣೆ ಮಾಡಬಹುದಾಗಿದ್ದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು – 69372 ಕಿಲೋ ಮೀಟರ್ ಹಾಗೂ
ಆಂಧ್ರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆ – 69284 ಕಿ.ಮೀ. ದೂರ ಕಾರ್ಯಚರಿಸಲು ಸಾಧ್ಯವಿದೆ ಎಂದು ಅಂದಾಜಿಸಲಿದೆ
ವಿಜಯವಾಡದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಪ್ರಶಾಂತ್ ಕುಮಾರ್ ಮಿಶ್ರಾ, ನಿರ್ದೇಶಕರು (ಸಿ ಮತ್ತು ಜಾ), ಕರಾರಸಾ ನಿಗಮ, ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾರ್ಯ), ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ), ಕರಾರಸಾ ನಿಗಮ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು (ಕಾರ್ಯ) ಎ.ಪಿ.ಎಸ್ ಆರ್ ಟಿ ಸಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.