ಬೆಂಗಳೂರು: ಕರ್ನಾಟಕದ ವಕೀಲರ ಸಮುದಾಯದ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂಧಿಸಿದೆ. ವಕೀಲರ ಬಹುಕಾಲದ ಹೋರಾಟಕ್ಕೂ ಜಯ ಸಿಕ್ಕಿದೆ.
ಬಹುದಿನಗಳ ಬೇಡಿಕೆಯಾದ ವಕೀಲರ ರಕ್ಷಣಾ ವಿಧೇಯಕವನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗಿದೆ. ಕಾನೂನು ಸಚಿವ ಎಚ್ಕೆ ಪಾಟೀಲ್ ಅವರು ಸೋಮವಾರ ಕರ್ನಾಟಕ ವಕೀಲರ ವಿರುದ್ಧದ ಹಿಂಸಾಚಾರ ತಡೆ ವಿಧೇಯಕ-2023ವನ್ನು ಸದನದಲ್ಲಿ ಮಂಡಿಸಿದರು.
ವಕೀಲರ ಸಂಘ ಸ್ವಾಗತ:
‘ಕರ್ನಾಟಕ ವಕೀಲರ ವಿರುದ್ಧದ ಹಿಂಸಾಚಾರ ತಡೆ ವಿಧೇಯಕ-2023’ ಮಂಡಿಸುವ ಮೂಲಕ ತಮ್ಮ ಬಹುಕಾಲದ ಬೇಡಿಕೆ ಈಡೇರುವಂತಾಗಿದೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಎಸ್.ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ, ಕಾರ್ಯದರ್ಶಿ ಟಿ.ಜಿ.ರವಿ, ಖಜಾಂಚಿ ಹರೀಶ್ ಎಂ ಟಿ., ಜಂಟಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ರಾಜ್ಯ ಸರ್ಕಾರದ ನಡೆಯನ್ನು ಸ್ವಾಗತಿಸಿದ್ದಾರೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರ ನಡೆ ಐತಿಹಾಸಿಕ ಎಂದು ವಕೀಲರ ಸಂಘದ ಈ ಮುಖಂಡರು ಬಣ್ಣಿಸಿದ್ದಾರೆ.
ಕಾಯ್ದೆಯ ಹೈಲೈಟ್ಸ್ ಹೀಗಿದೆ:
‘ಕರ್ನಾಟಕ ವಕೀಲರ ವಿರುದ್ಧದ ಹಿಂಸಾಚಾರ ತಡೆ ವಿಧೇಯಕ-2023’ ಇದಕ್ಕೆ ಕಾನೂನು ಸ್ವರೂಪ ಸಿಗಲಿದೆ.
ಕಾಯ್ದೆ ಜಾರಿಯಾದ ಬಳಿಕ – ವಕೀಲರ ಮೇಲೆ ಹಲ್ಲೆಮಾಡಿದವರಿಗೆ 6 ತಿಂಗಳಿಂದ 3 ವರ್ಷಗಳವರೆಗೆ ಜೈಲುಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ.
ಅಪರಾಧ ಪ್ರಕರಣಗಳಲ್ಲಿ ವಕೀಲರನ್ನು ಬಂಧಿಸಿದ್ದಲ್ಲಿ ವಕೀಲರ ಸಂಘಕ್ಕೆ ಪೊಲೀಸರು ಮಾಹಿತಿ ನೀಡಬೇಕು.