ಉಡುಪಿ : ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆಂಬ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ಹಿರ್ಗಾನ ಎಂಬವರ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣಾ ಎಸ್ಸೈ ಮಧು ಹಲ್ಲೆ ನಡೆಸಿದ್ದಾರೆಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ವರ್ಷದ ಹಿಂದೆ ಫೇಸ್ಬುಕ್ನಲ್ಲಿ ಹಾಕಿದ್ದ ಪೋಸ್ಟ್ ಒಂದಕ್ಕೆ ಸಂಬಂಧಿಸಿದಂತೆ ರಾಧಾಕೃಷ್ಣ ಅವರನ್ನು ವಿಚಾರಣೆಗೆ ಕಾರ್ಕಳ ಪೊಲೀಸರು ಕರೆಸಿಕೊಂಡಿದ್ದರು. ಯೋಧರ ವಿರುದ್ಧ ರಾಧಾಕೃಷ್ಣ ನಾಯಕ್ ಪೋಸ್ಟ್ ಹಾಕಿದ್ದಾಗಿ ಆರೋಪಿಸಲಾಗಿತ್ತು. ಆದರೆ ತನ್ನ ಹೆಸರಿನಲ್ಲಿ ನಕಲಿ ಅಕೌಂಟ್ ಮಾಡಿ ಈ ಪೋಸ್ಟ್ ಹಾಕಲಾಗಿದೆ ಎಂದು ರಾಧಾಕೃಷ್ಣ ವಾದಿಸುತ್ತಾ ಬಂದಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಬೆಂಗಳೂರಿನಿಂದ ವಾಪಸಾಗಿದ್ದ ರಾಧಾಕೃಷ್ಣ ಕಾರ್ಕಳದಲ್ಲಿ ನೆಲೆಸಿದ್ದರು. ಈ ವೇಳೆ ಕಾರ್ಕಳ ಪೊಲೀಸರು ಅವರನ್ನು ತನಿಖೆಗೆ ಬರುವಂತೆ ಸೂಚನೆ ನೀಡಿದ್ದರು. ತನಿಖೆಗೆ ಹಾಜರಾದ ವೇಳೆ ಎಸ್ಐ ಮಧು ಅವರು ಹಲ್ಲೆ ನಡೆಸಿದ್ದಾಗಿ ರಾಧಾಕೃಷ್ಣ ದೂರಿದ್ದಾರೆ. ವರ್ಷದಷ್ಟು ಹಳೆಯ ಪೋಸ್ಟಿಗೆ ಮತ್ತೆ ಠಾಣೆಗೆ ಕರೆಸಿಕೊಂಡು, ಹಲ್ಲೆ ನಡೆಸಿದ್ದಾರೆಂದು ಅವರು ಆರೋಪಿಸಿದ್ದಾರೆ. ರಾಧಾಕೃಷ್ಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ನಾಯಕರು, ಹೃದಯದ ಕಾಯಿಲೆಯಿಂದ ಬಳಲುತ್ತಿರುವ ರಾಧಾಕೃಷ್ಣ ಮೇಲೆ ಹಲ್ಲೆ ನಡೆಸಿರುವುದು ಅಮಾನವೀಯ ಎಂದು ಆಕ್ಷೇಪಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಪೊಲೀಸ್ ದೌರ್ಜನ್ಯದ ಆರೋಪ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಇವರ ಅನಾರೋಗ್ಯವನ್ನೂ ಲೆಕ್ಕಿಸದೆ, ಹಳೆ ಸುಳ್ಳು ಕೇಸ್ ಆಧರಿಸಿ, ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ನಾಯಕ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ.
ಇವರ ಅನಾರೋಗ್ಯವನ್ನೂ ಲೆಕ್ಕಿಸದೆ,
ಹಳೆ ಸುಳ್ಳು ಕೇಸ್ ಆಧರಿಸಿ,
ಪೊಲೀಸರು ದೌರ್ಜನ್ಯ ನಡೆಸಿದ್ದಾರೆ.
ಈ ಬಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿ ನೊಂದ ಯುವಕನಿಗೆ ನ್ಯಾಯ ಒದಗಿಸಬೇಕು.@DgpKarnataka pic.twitter.com/8zjPtLu3Lm— Siddaramaiah (@siddaramaiah) July 9, 2021