ದೆಹಲಿ: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಾಣು ಹಾವಳಿಗೆ ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ. ಇದೀಗ ಕೋವಿಡ್ ಸೋಂಕಿನಿಂದ ಪಾರಾಗಲು ವಯಸ್ಕರು ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ಮೊದಲಾದ ಲಸಿಕೆಯನ್ನು ವಯಸ್ಕರು ಪಡೆಯುತ್ತಿದ್ದರೆ, ಮಕ್ಕಳ ಪಾಲಿಗೆ ಸೂಕ್ತ ಲಸಿಕೆ ಯಾವುದಿದೆ ಎಂಬ ಚರ್ಚೆ ಸಾಗಿದೆ.
ಈ ನಡುವೆ, ‘ಝೈಡಸ್’ ಎಂಬ ಲಸಿಕೆ ಮಕ್ಜಳಿಗೆ ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಸೆಪ್ಟೆಂಬರ್ ವೇಳೆಗೆ 12ರಿಂದ 18 ವರ್ಷ ವಯಸ್ಸಿನವರಿಗೆ ಝೈಡಸ್ ಕ್ಯಾಡಿಲಾ ಕೋವಿಡ್ ಲಸಿಕೆಯು ಲಭ್ಯವಾಗಲಿದೆ ಎಂದು ಲಸಿಕೆ ನಿರ್ವಹಣೆಗೆ ಸಂಬಂಧಿಸಿದ ರಾಷ್ಟ್ರೀಯ ತಜ್ಞರ ಸಮಿತಿ ಮುಖ್ಯಸ್ಥ ಡಾ. ಎನ್.ಕೆ. ಆರೋರಾ ಮಾಹಿತಿ ನೀಡಿದ್ದಾರೆ.
ಝೈಡಸ್ ಕ್ಯಾಡಿಲಾ ಲಸಿಕೆಯ ತುರ್ತು ಬಳಕೆಗೆ ಕೆಲವೇ ವಾರಗಳಲ್ಲಿ ಅನುಮೋದನೆ ಸಿಗಲಿದೆ ಎಂದು ಅವರು ಸುದ್ದಿಸಂಸ್ಥೆಯೊಂದರ ಜೊತೆ ಮಾಹಿತಿ ಹಂಚಿಕೊಳ್ಳುವ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.