ಕರಾವಳಿ ಕಾಲೇಜುಗಳ ಸಮೂಹದಲ್ಲಿ ‘ಆಜಾದಿ ಕಾ ಅಮೃತಮಹೋತ್ಸವ’ದ ವಿಶೇಷ ಸರಣಿ ಕಾರ್ಯಕ್ರಮ.. ಯುವಜನರ ಭವಿಷ್ಯ ಬರೆದ ಶಿಕ್ಷಕರಿಗೆ ಸನ್ಮಾನ.. ವಿವಿಧ ಕ್ಷೇತ್ರಗಳ ಸಾಧಕರಿಗೆ ಪುರಸ್ಕಾರ.. 75 ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯಲ್ಲಿ ಶಿಕ್ಷಣ ಸೌಲಭ್ಯ.. ಹೀಗೆ ಸಾಗಿದೆ ’75 ವರ್ಷ; 75 ಕಾರ್ಯ..’
ಮಂಗಳೂರು: ಭಾರತೀಯ ಸಂಸ್ಕೃತಿಕ ವೈಭವಕ್ಕೆ ಗರಿ ಇಡುವ ಶಿಕ್ಷಣ ಕಾಶಿ ಎಂದೇ ಗುರುತಾಗಿರುವ ‘ಕರಾವಳಿ ಕಾಲೇಜುಗಳ ಸಮೂಹ’ ಇದೀಗ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಭಿನ್ನವಾಗಿ ಆಚರಿಸುತ್ತಿದೆ. ಈ ವರ್ಷದ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಶಿಕ್ಷಣ ತಜ್ಞ ಗಣೇಶ್ ರಾವ್ ಅವರು ಮುನ್ನುಡಿ ಬರೆದಿದ್ದಾರೆ.
ಇಂಜಿನಿಯರಿಂಗ್, ನರ್ಸಿಂಗ್, ಫಾರ್ಮಸಿ, ಮ್ಯಾನೇಜ್ಮೆಂಟ್, ಫ್ಯಾಷನ್ ಟೆಕ್ನಾಲಜಿ ಸಹಿತ ವಿವಿಧ ಮಜಲುಗಳಲ್ಲಿ ಶಿಕ್ಷಣ ಕ್ರಾಂತಿ ಎಬ್ಬಿಸಿರುವ
‘ಕರಾವಳಿ ಶಿಕ್ಷಣ ಸಮೂಹ’ ಪ್ರಸ್ತುತ ದಶಕದಾರಂಭದಲ್ಲಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಮೆಡಿಕಲ್ ಕಾಲೇಜುಗಳನ್ನು ಆರಂಭಿಸಿ ವೈದ್ಯಕೀಯ ಕ್ಷೇತ್ರದಲ್ಲೂ ಮುಂಚೂಣಿ ಹೆಜ್ಜೆ ಇಟ್ಟಿದೆ. ಇದೇ ಕ್ಷೇತ್ರದ ಮೂಲಕ ಸಾರ್ವಜನಿಕ ಕೈಂಕರ್ಯಕ್ಕೆ ಹೆಜ್ಜೆ ಇಟ್ಟಿರುವ ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ ಜಿ.ಆರ್.ಎಜುಕೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಗಣೇಶ್ ರಾವ್ ಅವರ ಕ್ರಮ ನಾಡಿನ ಗಮನಸೆಳೆದಿದೆ.
ಏನಿದು 75 ವರ್ಷ; 75 ಕಾರ್ಯ?
ದೇಶ ಇದೀಗ ‘ಆಜಾದಿ ಕಾ ಅಮೃತಮಹೋತ್ಸವ’ ಆಚರಿಸುತ್ತಿದೆ. ‘ಹರ್ ಘರ್ ತಿರಂಗ’ ಸಹಿತ ಅಪೂರ್ವ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಕರೆ ನೀಡಿದ್ದು ದೇಶವಾಸಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಜೊತೆಯಲ್ಲೇ ಗಣೇಶ್ ರಾವ್ ಅವರ ಪರಿಕಲ್ಪನೆಯು ಶಿಕ್ಷಣ ಕ್ಷೇತ್ರದಲ್ಲಿ ಗಮನಸೆಳೆದಿದೆ.
ಮಂಗಳೂರಿನ ಪ್ರತಿಷ್ಠಿತ ಕರಾವಳಿ ಕಾಲೇಜುಗಳ ಸಮೂಹದಲ್ಲಿ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಹಲವು ’75’ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಿಕ್ಷಕರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ, ಶಿಕ್ಷಾರ್ಥಿಗಳಿಗೆ ನೆರವಿನಹಸ್ತ, ಆರೋಗ್ಯ ಶಿಬಿರಗಳಂತಹಾ ನಿರಂತರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಗಳ ಪರಿಣಾಮಕಾರಿ ಜಾರಿಗಾಗಿ ದೇಶದ ವಿವಿಧ ರಾಜ್ಯಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಕುಲಪತಿಗಳು, ವಿಶ್ರಾಂತ ಕುಲಪತಿಗಳು, ಶಿಕ್ಷಣ ತಜ್ಞರು ಹಾಗೂ ವಿವಿಧ ಕ್ಷೇತ್ರಗಳ ಪರಿಣಿತರ ಸಲಹಾ ಸಮಿತಿಯನ್ನು ರಚಿಸಲಾಗಿದೆ.
ಈ ಅಮೃತಮಹೋತ್ಸವ ಕಾರ್ಯಕ್ರಮಗಳ ಕುರಿತಂತೆ ಗಣೇಶ್ ರಾವ್ ಮಾಹಿತಿ ನೀಡಿದ್ದಾರೆ. ಮಂಗಳೂರಿನ ನೀರುಮಾರ್ಗದಲ್ಲಿರುವ ಜಿ.ಆರ್.ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಅವರು ನಡೆಸಿದ ಸುದ್ದಿಗೋಷ್ಠಿ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿತ್ತು. ಅವರು ಪ್ರಕಟಿಸಿದ ಯೋಜನೆಗಳ ಪೈಕಿ ಪ್ರಮುಖ ಕಾರ್ಯಕ್ರಮಗಳು ಹೀಗಿವೆ.
-
ಶಿಕ್ಷಕರ ಸಹಿತ 75 ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
-
75 ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿಯಲ್ಲಿ ಪ್ರವೇಶಾವಕಾಶ ಕಲ್ಲಿಸಲಾಗಿದೆ.
-
ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ ಜಿ.ಆರ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ 75 ಸರಣಿ ಆರೋಗ್ಯ ಕಾರ್ಯಕ್ರಮಗಳು.
-
ಇಂಜಿನಿಯರಿಂಗ್, ಫಿಸಿಯೋಥರಪಿ. ಮ್ಯಾನೇಜ್ಮೆಂಟ್, ಇಂಟಿರಿಯರ್ ಡಿಸೈನ್, ಫ್ಯಾಶನ್ ಡಿಸೈನ್, ಇತ್ಯಾದಿ ಕೋರ್ಸ್ಗಳಲ್ಲಿ 75 ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಪ್ರವೇಶ.
-
ಸಿಇಟಿ ರಾಂಕಿಂಗ್ನಲ್ಲಿ 2000 ಒಳಗಿನ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶೇ.100 ರಷ್ಟು ಶುಲ್ಕ ವಿನಾಯಿತಿ.
-
ಸಿಇಟಿಯಲ್ಲಿ 2000 ರಿಂದ 5000 ದೊಳಗಿನ ರಾಂಕ್ ಬ್ಯಾಂಕ್ ವಿದ್ಯಾರ್ಥಿಗಳಿಗೆ ಶೇ.75 ಶುಲ್ಕ ವಿನಾಯಿತಿ,
-
ಪ್ರವೇಶ ಪರೀಕ್ಷೆಯಲ್ಲಿ 5000 ರಿಂದ 10000 ದೊಳಗಿನ ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶೇ.50 ಶುಲ್ಕ ವಿನಾಯಿತಿಯಲ್ಲಿ ಶಿಕ್ಷಣ.
-
ಆರ್ಥಿಕವಾಗಿ ಹಿಂದುಳಿದವರಿಗಾಗಿ ವಿಶೇಷ ಶೈಕ್ಷಣಿಕ ನೆರವು..
-
ಎಸ್.ಸಿ-ಎಸ್ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಅಂಗವಿಕಲ, ವಿದ್ಯಾರ್ಥಿಗಳಿಗೆ ವಿಶೇಷ ಶುಲ್ಕ ವಿನಾಯಿತಿ.
-
ಅನ್ನದಾತರ, ಅಧ್ಯಾಪಕರ, ಸೈನಿಕರ ಮಕ್ಕಳಿಗೆ, ಮಾಧ್ಯಮ ಪ್ರತಿನಿಧಿಗಳ ಮಕ್ಕಳಿಗೆ ಹಾಗೂ ಕಡಿಮೆ ಆದಾಯದ ಕುಟುಂಬದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ಮೇರೆಗೆ ಶುಲ್ಕ ವಿನಾಯಿತಿಯಲ್ಲಿ ಪ್ರವೇಶಾವಕಾಶ.
ವಿಶೇಷ ಸಲಹಾ ಸಮಿತಿ..
ಸ್ವಾತಂತ್ರ್ಯದ ’75 ವರ್ಷ; 75 ಕಾರ್ಯ’ ಸೂತ್ರದನ್ವಯ ಕೈಗೊಂಡಿರುವ ಈ ಕಾರ್ಯಕ್ರಮದ ಫಲಪ್ರದ ಜಾರಿಗಾಗಿ ಗಣೇಶ್ ರಾವ್ ಅವರು ಪ್ರತಿಷ್ಠಿತರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ. ಈ ಸಲಹಾ ಸಮಿತಿಯಲ್ಲಿ ಕಣ್ಣೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ಎಂ. ಅಬ್ದುಲ್ ರಹಿಮಾನ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ಡಿ.ಶಿವಲಿಂಗಯ್ಯ, ಶಾರದ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಿರಿಯ ಶಿಕ್ಷಣ ತಜ್ಞರಾದ ಪ್ರೊ.ಎಂ.ಬಿ. ಪುರಾಣಿಕ್, ವಿಷನ್ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತು ಸರಕಾರದ ಪ್ಲಾನಿಂಗ್ ಕಮಿಷನ್ನ ಸದಸ್ಯ ಮಾರ್ಸಲ್ ಮೊಂಥರೋ ಇವರು ಸದಸ್ಯರಾಗಿದ್ದಾರೆ.
ಪ್ರವೇಶಾಕಾಂಕ್ಷಿ ವಿದ್ಯಾರ್ಥಿಗಳು, scholarshipkaravaligroup@gmail.com ಗೆ ಅರ್ಜಿಯನ್ನು ಕಳುಹಿಸಲು ಅವಕಾಶ ಕಲ್ಲಿಸಲಾಗಿದೆ ಎಂದು ಗಣೇಶ್ ರಾವ್ ತಿಳಿಸಿದ್ದಾರೆ.
ಶಿಕ್ಷಕರು ಸಹಿತ 75 ಸಾಧಕರಿಗೆ ಸನ್ಮಾನ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಶಿಕ್ಷಕರ ಸಹಿತ 75 ಸಾಧಕರಿಗೆ ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ ಜಿ.ಆರ್.ಎಜುಕೇಶನ್ ಟ್ರಸ್ಟ್ ವತಿಯಿಂದ ಸನ್ಮಾನ ಮಾಡಲು ನಿರ್ಧರಿಸಲಾಗಿದೆ ಎಂದು ಗಣೇಶ್ ರಾವ್ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ವೈದ್ಯಕೀಯ, ಇಂಜಿನಿಯರಿಂಗ್, ಆಯುರ್ವೇದ, ನರ್ಸಿಂಗ್, ಫಾರ್ಮಸಿ, ಫಿಜಿಯೋಥರಾಪಿ ಸಹಿತ ವಿವಿಧ ವೃತ್ತಿಪರ ಕೋರ್ಸ್ಗಳ ಅದ್ಯಾಪಕರುಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಸಾಧಕರನ್ನು ತಮ್ಮ ಟ್ರಸ್ಟ್ ವತಿಯಿಂದ ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದವರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಅಭಿನಂದನಾ ಕಾರ್ಯಕ್ರಮಕ್ಕೂ ಪ್ರತ್ಯೇಕ ಸಲಹಾ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು ಈ ಸಮಿತಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ.ಬಲವೀರ ರೆಡ್ಡಿ, ಬೆಂಗಳೂರು RGUHSನ ಮಾಜಿ ಕುಲಪತಿ ಡಾ.ಎಸ್.ರಮಾನಂದ ಶೆಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಸದಸ್ಯರಾಗಿದ್ದಾರೆ. ಈ ಸಮಿತಿ ಆಯ್ಕೆ ಮಾಡುವ ಗಣ್ಯರನ್ನು ಅಮೃತ ಮಹೋತ್ಸವ ಫಲಕದೊಂದಿಗೆ ಸನ್ಮಾನಿಸಲಾಗುತ್ತದೆ ಎಂದವರು ತಿಳಿಸಿದ್ದಾರೆ. ಸದ್ಯವೇ ಈ ಅದ್ಧೂರಿ ಅಭಿನಂದನಾ ಸಮಾರಂಭದ ದಿನಾಂಕ ನಿರ್ಧರಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
















































