ಕಲಬುರಗಿ: ಭಾನುವಾರದ ಇಂದು ನಗರದಾದ್ಯಂತ ಬಿಜೆಪಿ ಪರವಾಗಿ ಚುನಾವಣಾ ಪ್ರಚಾರ. ಎಲ್ಲಾ ವಾರ್ಡಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳಿದಾಗ ಮತದಾರರಿಂದ ಉತ್ತಮ ಸ್ಪಂದನೆ ಎಂದ ಬಿಜೆಪಿ.
ಈ ಬಾರಿ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಭಾರತೀಯ ಜನತಾ ಪಕ್ಷದ ಸ್ಪಷ್ಟ ಬಹುಮತವನ್ನು ಗಳಿಸಿ ಅಧಿಕಾರದ ಗದ್ದುಗೆ ಹಿಡಿಯುವುದು ನಿಶ್ಚಿತ ಎಂದು ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ ಹೇಳಿದ್ದಾರೆ.
ಇಂದು ಬೆಳಿಗ್ಗೆ ಬೆಂಗಳೂರಿನಿಂದ ಕಲಬುರಗಿ ನಗರಕ್ಕೆ ಆಗಮಿಸಿದ ಕೂಡಲೇ ಕಾರ್ಯಪ್ರವೃತ್ತರಾದ ಬೈರತಿ ಬಸವರಾಜ್ ಪ್ರಚಾರದ ಅಖಾಡಕ್ಕೆ ಇಳಿದರು. ಅಭ್ಯರ್ಥಿಗಳ ಪರ ವಾರ್ಡಗಳಲ್ಲಿ ಸುತ್ತಾಡಿ ಸಂಚಲನ ಮೂಡಿಸಿದರು.
2019 ರಲ್ಲಿ ನಮ್ಮ ಪಕ್ಷದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದೆ. ನಗರಾಭಿವೃದ್ಧಿ ಸಚಿವನಾಗಿ ನಾನು ರಾಜ್ಯದ ಹತ್ತು ಮಹಾನಗರಗಳ ಅಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡಿದ್ದೇನೆ. ನಮ್ಮ ಸರ್ಕಾರ ಬಂದ ಮೇಲೆ ಕಲಬುರಗಿ ನಗರದಲ್ಲಿ ಸಾಕಷ್ಟು ಕೆಲಸ ಕಾರ್ಯಗಳು ಆಗಿದೆ ಎಂದು ಬೈರತಿ ಬಸವರಾಜ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಗರೋತ್ಥಾನ ಯೋಜನೆ ಮೂಲಕ ರಾಜ್ಯದ ನಗರಗಳಲ್ಲಿ ಅಭಿವೃದ್ಧಿ ಹೊಂದಿದ. ಮತ್ತಷ್ಟು ಅಭಿವೃದ್ಧಿ ಮಾಡಲು ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಲ್ಲಿ ಅಧಿಕಾರ ಹಿಡಿದು ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರಗೇಶ ನಿರಾಣಿ, ಕಲಬುರಗಿ ಸಂಸದರಾದ ಡಾ.ಉಮೇಶ್ ಜಾಧವ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ್, ರಾಜಕುಮಾರ ತೆಲ್ಕೂರ್, ಬಸವರಾಜ ಮತ್ತಿಮೋಡ್, ಡಾ.ಅವಿನಾಶ್ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಜಿ.ಟಿ.ಪಾಟೀಲ ಸೇರಿದಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶಿವರಾಜ್ ಪಾಟೀಲ ರದ್ದವಾಡಗಿ, ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ಪಾಲಿಕೆ ಚುನಾವಣೆಗಳನ್ನು ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಇದೇ ವೇಳೆ ಉಪಸ್ಥಿತರಿದ್ದರು.