ಕಲಬುರ್ಗಿ: ಕಾಂಗ್ರೆಸ್ ಆಡಳಿತದಲ್ಲಿ ಕಲಬುರ್ಗಿ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಇತ್ತು. ಜಿಲ್ಲಾ ಉಸ್ತುವಾರಿಯಾಗಿ ಬಂದಿದ್ದಾಗ ನಲ್ಲಿಗಳಲ್ಲಿ ಯುಜಿಡಿ ನೀರು ಬರುತ್ತಿತ್ತು. ಟ್ರೀಟ್ ಮೆಂಟ್ ಇಲ್ಲದೇ ಭೀಮಾ ನದಿ ನೀರು ಬರುತ್ತಿತ್ತು. ಕಾಂಗ್ರೆಸ್ ಅವರು ಶುದ್ಧ ಕುಡಿಯುವ ನೀರು ಕೊಡಲೂ ಲಾಯಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಲಬುರ್ಗಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದು ಪಾಟೀಲ್ ಪರವಾಗಿ ಮಳೆಯ ನಡುವೆಯೂ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿ ಮಾತನಾಡಿದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೊಡ್ಡ ಪ್ರಮಾಣದ ಅನುದಾನ ಬಂದು ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಲಾಗಿದೆ. ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕರು ಈ ಕ್ಷೇತ್ರದ ಅಭಿವೃದ್ಧಿ ಮಾಡಲಿಲ್ಲ. ಜಾತಿ ಮತ ಪಂಥ ಎಲ್ಲ ಬೇಧವನ್ನು ಮರೆತು ಕಲಬುರ್ಗಿ ಉತ್ತರದ ಸಮಗ್ರ ಅಭಿವೃದ್ಧಿ ಗೆ ಬಿಜೆಪಿಗೆ ಬೆಂಬಲಿಸಬೇಕು. ಉತ್ತರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ನಮ್ಮ ಚಂದು ಪಾಟೀಲ್ ಶಾಸಕರಲ್ಲದೆಯೂ ಈ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಪಡೆದುಕೊಳ್ಳಲು ನನ್ನ ಬಳಿ ಬರುತ್ತಿದ್ದ. ಅವನಿಗೆ ಹಠ, ಛಲ ಇದೆ. ಯಾವ ನಾಯಕನಿಗೆ ಹಠ, ಛಲ ಇರುತ್ತದೋ ಅವರು ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯ. ಚಂದು ಪಾಟೀಲ್ ಗೆ ಇರುವ ಛಲ, ಹಠ ಬೇರೆ ಯಾವ ಅಭ್ಯರ್ಥಿಗಳಿಗೂ ಇಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ನೀಡಿದ್ದು ದೌರ್ಭಾಗ್ಯವಷ್ಟೇ:
2013-18 ರ ಅವಧಿಯ ಕಾಂಗ್ರೆಸ್ ಸರ್ಕಾರ ದೌರ್ಭಾಗ್ಯದ ಸರ್ಕಾರ. ರಾಜ್ಯದ ಜನತೆಗೆ ದೌರ್ಭಾಗ್ಯಗಳನ್ನಷ್ಟೇ ನೀಡಿದರು. ಯಾವ ಭಾಗ್ಯಗಳೂ ಜನರನ್ನು ಮುಟ್ಟಲಿಲ್ಲ. ಬರೀ ಏಜಂಟರಿಗೆ ಮಾತ್ರ ಭಾಗ್ಯ ಸಿಕ್ಕಿತ್ತು. ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರತಿವ್ಯಕ್ತಿಗೆ 10 ಕೆಜಿಯಂತೆ ಒಂದು ಕುಟುಂಬಕ್ಕೆ 30 ಕೆಜಿ ಅಕ್ಕಿ ಕೊಡುತ್ತಿದ್ದೆವು. 2 ವರ್ಷ ಗರೀಬ್ ಕಲ್ಯಾಣ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿಯವರು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಮೋದಿಯವರ ಅಕ್ಕಿಗೆ ತಮ್ಮ ಫೊಟೊ ಹಾಕಿಕೊಂಡು ಪ್ರಚಾರ ಪಡೆದರು. ಕಾಂಗ್ರೆಸ್ ಗ್ಯಾರಂಟಿ ಹೆಸರಲ್ಲಿ ಜನರನ್ನು ಯಾಮಾರಿಸುತ್ತಿದ್ದಾರೆ. ಜನರು ಅವರ ಗ್ಯಾರಂಟಿ ಯನ್ನು ನಂಬುತ್ತಿಲ್ಲ. ಮೇ 10 ರ ವರೆಗೆ ಮಾತ್ರ ಗ್ಯಾರಂಟಿ. ಆ ಮೇಲೆ ಬರೀ ಗಳಗಂಟಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಉತ್ತರ ಕರ್ನಾಟಕದಲ್ಲಿ ಕ್ರಾಂತಿಯಾಗಲಿದೆ
ಈ ಕ್ಷೇತ್ರದಲ್ಲಿ ಬದಲಾವಣೆ ಅವಶ್ಯಕತೆ ಇದೆ. ಉತ್ತರ ಕರ್ನಾಟಕದಲ್ಲಿ ಕ್ರಾಂತಿಯಾಗುತ್ತದೆ. ಇಲ್ಲಿ ಕಮಲ ಅರಳಲಿದೆ. ಇದರಿಂದ ಚಂದು ಪಾಟೀಲ್ ವಿಧಾನಸಭೆಯ ಪ್ರವೇಶ ಮಾಡುತ್ತಾರೆ. ನಾನು ಉತ್ತರ ಕ್ಷೇತ್ರ ಗೆಲ್ಲಿಸಿಕೊಂಡು ಬರುತ್ತೇನೆ ಅಂತ ನಮ್ಮ ನಾಯಕರಿಗೆ ಆಶ್ವಾಸನೆ ಕೊಟ್ಟಿದ್ದೇನೆ. ನೀವು ದಣಿವರಿಯದೇ ಇವರನ್ನು ಗೆಲ್ಲಿಸಿಕೊಂಡು ಬಂದು ವಿಜಯೋತ್ಸವ ಮಾಡಬೇಕು. ಕಾಂಗ್ರೆಸ್ ನಿಂದ ಕಲಬುರ್ಗಿ ಉತ್ತರದಲ್ಲಿ ಕಾರ್ಮೊದ ಕವಿದಿದೆ. ಇಲ್ಲಿ ಚಂದ್ರನ ದರ್ಶನ ಆಗಬೇಕು. ಇಲ್ಲಿ ಬಿಜೆಪಿ ಅರಳಿದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಆಗ ತಾಯಿ ಭುವನೇಶ್ವರಿಯ ಸೇವೆ ಮಾಡುತ್ತಾ ಬಸವಣ್ಣನ ಆಶಯದಂತೆ ಸರ್ಕಾರ ನಡೆಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.