ಬೆಂಗಳೂರು: ವಿಶ್ವವಿಖ್ಯಾತ ಜೋಗ್ ಜಲಪಾತದಲ್ಲಿ ರೂ.185.00ಕೋಟಿ ವೆಚ್ಚದಲ್ಲಿ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲು ಟೆಂಡರ್ ಅಂತಿಮವಾಗಿದ್ದು, ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಸಿ.ಪಿ. ಯೋಗೇಶ್ವರ್ ಪ್ರಕಟಿಸಿದ್ದಾರೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಸಂಸ್ಥೆಯಿಂದ ಈ ಬೃಹತ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಕೇರಳ ಹಾಗೂ ಗೋವಾ ರಾಜ್ಯಗಳಿಂದ ಜೋಗ ಜಲಪಾತಕ್ಕೆ 35 ಕಿ.ಮೀ. ಉದ್ದದ ಜಲಮಾರ್ಗದಲ್ಲಿ ಪ್ರವಾಸಿಗರು ಆಗಮಿಸಲು ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ.ಸರ್ಕಾರಿ ರಜಾ ದಿನಗಳಂದು ಲಿಂಗನಮಕ್ಕಿ ಜಲಾಶಯದಿಂದ ಪ್ರಥಮ ಹಂತವಾಗಿ 200 ಕ್ಯೂಸೆಕ್ಸ್ ನೀರನ್ನು ಹರಿಸಿ ಜೋಗದ ಸೊಬಗನ್ನು ಪ್ರವಾಸಿಗರಿಗೆ ಉಣಿಸಲಾಗುವುದು. ಮುಂದಿನ ದಿನಗಳಲ್ಲಿ ನೀರಿನ ಪ್ರಮಾಣವನ್ನು 300 ಕ್ಯೂಸೆಕ್ಸ್ ಗೆ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಸಾವಿರ ಪ್ರವಾಸಿಗರು ವಾಸ್ತವ್ಯ ಮಾಡಲು 2 ಹೋಟೆಲ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದ ಪ್ರತಿಷ್ಠಿತ ಯೋಜನೆಯಾಗಿರುವ ಹೆಲಿ ಟೂರಿಸಂ ಸರ್ಕೀಟ್ ಗೆ ಜೋಗಜಲಪಾತವನ್ನು ಸೇರ್ಪಡೆ ಮಾಡಲಾಗಿದೆ. ಒಟ್ಟಾರೆ ವರ್ಷದ 365 ದಿನಗಳು ಜೋಗದ ಸೊಬಗನ್ನು ರಾಜ್ಯ, ಹೊರ ರಾಜ್ಯಗಳು ಹಾಗೂ ದೇಶ ವಿದೇಶಗಳ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.