ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ನಿರ್ಗಮಿಸಿ, ಸಾಂಸ್ಕೃತಿಕ ನಗರಿಯಿಂದ ದೂರವಿದ್ದರೂ ಜೆಡಿಎಸ್ ಶಾಸಕರ ಆಕ್ರೋಶ ತಣ್ಣಗಾಗಿಲ್ಲ. ಇದೀಗ ಆ ಅಧಿಕಾರಿ ಮೈಸೂರು ಡಿಸಿಯಾಗಿದ್ದಾಗ ಭ್ರಷ್ಟಾಚಾರನಡೆದಿದೆ ಎಂದು ಜೆಡಿಎಸ್ ಶಾಸಕ ಸಾ.ರ.ಮಹೇಶ್ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಗೆ ಬಂದ ಎಂಟು ಕೋಟಿ ಎಸ್‌ಎಸ್‌ಸಿ ಅನುದಾನ ದುರ್ಬಳಕೆಯಾಗಿದೆ ಎಂದು ಆರೋಪಿಸಿದರು. ಪ್ಲಾಸ್ಟಿಕ್ ಮುಕ್ತ ಮೈಸೂರು ಮಾಡುವ ನೆಪದಲ್ಲಿ ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಅನುಮತಿ ಪಡೆಯದೆ ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ ಎಂದರು.
ಉಪವಿಭಾಗಾಧಿಕಾರಿಯೊಬ್ಬರ ಪತಿಯೊಬ್ಬರು ಬ್ಯಾಗ್ ಸರಬರಾಜು ಗುತ್ತಿಗೆದಾರರಾಗಿದ್ದು, ಅವರಿಂದ ಕಿಕ್‌ಬ್ಯಾಕ್ ಪಡೆದು ಅವ್ಯವಹಾರ ಮಾಡಲಾಗಿದೆ ಎಂದು ಆರೋಪಿಸಿದರ ಅವರು, ಬ್ಯಾಗ್ ಖರೀದಿಯಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದರು.
ಇದಕ್ಕೆ ರೋಹಿಣಿ ಸಿಂಧೂರಿ ಅವರೇ ಹೊಣೆ ಎಂದು ಬೊಟ್ಟು ಮಾಡಿದ ಸಾ.ರ.ಮಹೇಶ್, ಕೂಡಲೇ ತಪ್ಪಿತಸ್ಥರನ್ನು ಅಮನತು ಮಾಡಿ ತನಿಖೆ ನಡೆಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.