“ರಾಜಕೀಯ ಸಾಂಪ್ರದಾಯಿಕ ಎದುರಾಳಿಯಾಗಿ ಚುನಾವಣಾ ಕಣದಲ್ಲಿದ್ದ ಈ ಇಬ್ಬರು ನಾಯಕರೂ ಸಾಮಾಜಿಕ ಹಿತಾಸಕ್ತಿ ವಿಚಾರದಲ್ಲಿ ಸಮಾನ ಮನಸ್ಕರು..”
ಮಂಗಳೂರು: ನಾಡಿನ ಹಿರಿಯ ಮುತ್ಸದ್ದಿ ರಾಜಕಾರಣಿ ಜನಾರ್ದನ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಭೇಟಿ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಹಲವು ವರ್ಷಗಳ ಕಾಲ ರಾಜಕೀಯ ಸಾಂಪ್ರದಾಯಿಕ ಎದುರಾಳಿಯಾಗಿ ಚುನಾವಣಾ ಕಣದಲ್ಲಿದ್ದ ಈ ಇಬ್ಬರು ನಾಯಕರು ಸಾಮಾಜಿಕ ಹಿತಾಸಕ್ತಿ ವಿಚಾರದಲ್ಲಿ ಸಮಾನ ಮನಸ್ಕರು ಎಂಬುದಕ್ಕೆ ಈ ಭೇಟಿ ಸಾಕ್ಷಿಯಾಯಿತು.
ಹಿರಿಯರಾದ ಜನಾರ್ದನ ಪೂಜಾರಿ ಅವರನ್ನು ಭೇಟಿಯಾದ ಸಂದರ್ಭದ ಫೊಟೋವನ್ನು ಹಂಚಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷರೂ ಆದ ನಳಿನ್ ಕುಮಾರ್ ಕಟೀಲ್, ಪೂಜಾರಿಯವರು ಈ ನಾಡು ಕಂಡ ಶ್ರೇಷ್ಟ ಜನನಾಯಕರೂ, ನಮ್ಮೆಲ್ಲರ ಆದರ್ಶಪ್ರಾಯರೂ ಆಗಿದ್ದಾರೆಂದು ಬಣ್ಣಿಸಿದ್ದಾರೆ. ಮಂಗಳೂರು ದಸರಾದ ರೂವಾರಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ಹರಿಕಾರ, ಮಾಜಿ ಕೇಂದ್ರ ಸಚಿವರಾದ ಜನಾರ್ದನ ಪೂಜಾರಿಯವರನ್ನು ಶ್ರೀ ಕ್ಷೇತ್ರದಲ್ಲಿ ಭೇಟಿಯಾಗುವ ಅವಕಾಶ ದೊರಕಿತು. ಎಂದಿನ ಪ್ರೀತಿ, ನಿಷ್ಕಲಂಕ ಮನಸ್ಸಿನಿಂದ ಮನತುಂಬಿ ಹರಸಿದರು ಎಂದು ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.



















































