ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದಿಂದ ಪೆಟ್ರೋಲ್ ಬೆಲೆ ಏರಿಕೆಯಾಗಿ ರಿಪಬ್ಲಿಕನ್ ಪಕ್ಷದ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ. ಆದರೆ, ಮತ್ತೆ ಸೇನಾ ಕಾರ್ಯಾಚರಣೆ ಕೈಗೊಳ್ಳಬೇಕಾದರೂ ನಿರ್ಧಾರ ಬದಲಿಸುವುದಿಲ್ಲ ಎಂದಿದ್ದಾರೆ.
ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಇರಾನ್ ವಿರುದ್ಧದ ಕಾರ್ಯಾಚರಣೆ ಅನಿವಾರ್ಯವಾಗಿತ್ತು. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದ ಅವರು, ಆ ದೇಶದ ನೌಕಾಪಡೆ, ವಾಯುಪಡೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗೆ ಭಾರಿ ಹಾನಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಯುದ್ಧದ ರಾಜಕೀಯ ಪರಿಣಾಮದ ಅರಿವು ಮೊದಲೇ ಇತ್ತು ಎಂದಿರುವ ಟ್ರಂಪ್, ತಮ್ಮ ಹೆಸರು ಮತಪತ್ರದಲ್ಲಿದ್ದರೆ ರಿಪಬ್ಲಿಕನ್ ಪಕ್ಷ ಗೆಲ್ಲುತ್ತಿತ್ತು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ಬಳಿಕ ಡೆಮಾಕ್ರಟಿಕ್ ಪಕ್ಷದೊಂದಿಗೆ ಕೆಲಸ ಮಾಡಲು ಸಿದ್ಧ ಎಂದ ಅವರು, ಆ ಪಕ್ಷ ವಿನಾಶಕಾರಿ ಧೋರಣೆ ಅನುಸರಿಸಿದರೆ ಸಹಕಾರ ಕಷ್ಟ ಎಂದು ಎಚ್ಚರಿಸಿದ್ದಾರೆ.















































































