ಬೆಂಗಳೂರು: ರಾಜ್ಯದ ಇಬ್ಬರು IPS ಅಧಿಕಾರಿಗಳ ಜಗಳ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯ ಆಗಿದ್ದು ಅಡಳಿತ ಯಂತ್ರದ ಕುಸಿತಕ್ಕೆ ಸಾಕ್ಷಿಯಾಗಿದೆ. ನಿವೃತ್ತಿ ಅಂಚಿನಲ್ಲಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ IPS ಅಧಿಕಾರಿಗಳ ಜಗಳವನ್ನು ನಿರ್ವಹಿಸಲು ವಿಫಲವಾಗಿದ್ದು ರಾಜ್ಯದ ಜನತೆಗೆ ಮನರಂಜನೆ ಒದಗಿಸಿದ್ದಾರೆ.
ರಾಜ್ಯ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಕಾಟು ಟೀಕೆ ಮಾಡಿರುವ ಮಾಜಿ ಶಾಸಕರೂ ಆಗಿರುವ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಲೋಕಾಯುಕ್ತ ಪ್ರಕರಣದಲ್ಲಿ FIR ರದ್ದುಗೊಳಿಸಲು ನಿರಾಕರಿಸಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ತಮ್ಮ ಸ್ಥಾನ ಉಳಿಸಿಕೊಳ್ಳಲು ಹೈಕಮಾಂಡ್ ಕೃಪೆ ಅನಿವಾರ್ಯವಾಗಿದ್ದು ಇವರು ರಾಜ್ಯದ ಆಡಳಿತ ಯಂತ್ರದ ಮೇಲೆ ಹಿಡಿತ ಕಳೆದುಕೊಂಡು ಹಿರಿಯ IPS ಮತ್ತು IAS ಅಧಿಕಾರಿಗಳು ಬಹಿರಂಗ ಹೇಳಿಕೆಗಳ ಮೂಲಕ ಬೀದಿ ಜಗಳ ಮಾಡಲು ಅವಕಾಶ ನೀಡಿದ್ದಾರೆ ಎಂದು ಅರ್ಪಿಸಿದ್ದಾರೆ.
ಭ್ರಷ್ಟಾಚಾರ ಆರೋಪದ ಮೇಲೆ ಈ ರೀತಿ IPS ಅಧಿಕಾರಿಗಳು ಬಹಿರಂಗವಾಗಿ ಕಾಳಗ ನೆಡೆಸಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ರಾಜ್ಯದ ಸರ್ಕಾರಿ ನೌಕರರ ಮತ್ತು IAS-IPS ಅಧಿಕಾರಿಗಳ ಸೇವಾ ನಿಯಮಗಳನ್ನು ಗಾಳಿಗೆ ತೂರಿ ಇಬ್ಬರು ಹಿರಿಯ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಬರಿದೆ ಪತ್ರಗಳನ್ನು ಮಾಧ್ಯಮಗಳಿಗೆ ಹಂಚಿಕೆ ಮಾಡಿಕೊಂಡಿದ್ದಾರೆ. ಮುಖ್ಯ ಮಂತ್ರಿಗಳ ಮತ್ತು ಮುಖ್ಯ ಕಾರ್ಯದರ್ಶಿಗಳ ವೈಫಲ್ಯವೇ IPS ಹಿರಿಯ ಅಧಿಕಾರಿಗಳ ಜಗಳ ಬೀದಿಗೆ ಬರಲು ಕಾರಣವಾಗಿದೆ ಎಂದು ರಮೇಶ್ ಬಾಬು ದೂರಿದ್ದಾರೆ.
ಮಂತ್ರಿಗಳ ಮೇಲೆ ಹಿಡಿತ ಕಳೆದುಕೊಂಡಿರುವ ಮುಖ್ಯ ಮಂತ್ರಿಗಳು ಈಗ ರಾಜ್ಯದ ಅಧಿಕಾರಿಗಳ ಮೇಲೂ ಹಿಡಿತ ಕಳೆದುಕೊಂಡಿದ್ದಾರೆ. ಮಾಧ್ಯಮಗಳ ಮೂಲಕ ಹಿರಿಯ ಅಧಿಕಾರಿಗಳ ಭ್ರಷ್ಟಾಚಾರ ಶಾಮೀಲು ಕುರಿತು ಚರ್ಚೆ ನಡೆಯುತ್ತಿದೆ. ಲಂಚದ ಆರೋಪ ಬಂದ ಅಭಕಾರಿ ಸಚಿವರ ತೆಗೆಯಲು ಬಿಜೆಪಿ ವಿಫಲವಾಗಿದೆ. ರಾಜ್ಯದ ಮುಖ್ಯಮಂತ್ರಿ ಮೇಲೆ ಅಕ್ರಮ ಡಿ ನೋಟಿಫಿಕೇಶನ್ ಹೆಸರಿನಲ್ಲಿ FIR ಇರುವುದು ಇತರೆ ಮಂತ್ರಿಗಳು ಮತ್ತು ಅಧಿಕಾರಿಗಳು ತಮ್ಮನ್ನು ತಾವು ಬಹಿರಂಗವಾಗಿ ಸಮರ್ಥಿಸಿಕೊಳ್ಳಲು ಅವಕಾಶ ನೀಡಿದೆ. Party with different ಎಂಬ ಬಿಜೆಪಿಯ ವಾಕ್ಯಕ್ಕೆ ಅಥವಾ ಹೇಳಿಕೆಗೆ ನಿಜ ಅರ್ಥ ಬರುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ, ಒಂದು ಪಕ್ಷವಾಗಿ ಬಿಜೆಪಿ ವಿಫಲವಾಗಿದ್ದು, ಹಿರಿಯ IAS-IPS ಅಧಿಕಾರಿಗಳ ಜಗಳ ನಮ್ಮ ರಾಜ್ಯದ ಮರ್ಯಾದೆ ರಾಷ್ಟ್ರ ಮಟ್ಟದಲ್ಲಿ ಹರಾಜಾಗುತ್ತಿದೆ. ಸಾಂವಿಧಾನಿಕ ಹುದ್ದೆ ಹೊಂದಿದವರು ಅದರ ನಿರ್ವಹಣೆಯಲ್ಲಿ ವೈಫಲ್ಯ ಕಂಡಿರುವುದರಿಂದ ಕರ್ನಾಟಕ ರಾಜ್ಯದಲ್ಲಿ ಅರಾಜಕತೆಯ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತ ನೆಡೆಸುವ ನೈತಿಕ ಶಕ್ತಿ ಕಳೆದುಕೊಂಡಿದೆ ಅವರು ವಿಶ್ಲೇಷಣೆ ಮಾಡಿದ್ದಾರೆ