ಬೆಂಗಳೂರು: ‘ರಾಜಕೀಯವಾಗಿ, ಸೈದ್ದಂತಿಕವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗದೆ ಅಸಹಾಯಕ ಸ್ಥಿತಿಯಲ್ಲಿರುವ ಬಿಜೆಪಿಯವರು ನನ್ನ ವಿರುದ್ಧದ ವೈಯಕ್ತಿಕ ದಾಳಿಯಲ್ಲಿ ತೃಪ್ತಿ ಕಾಣುತ್ತಿದ್ದಾರೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
‘ಬಿಜೆಪಿಯವರ ದ್ವೇಷದ ಹೇಳಿಕೆಗಳು ನನಗೆ ಹೊಸದಲ್ಲ, ನಾನು ಇವರ ಹಗರಣಗಳನ್ನು ಬಯಲಿಗಿಟ್ಟಿದ್ದೇ ಈ ವೈಯಕ್ತಿಕ ನಿಂದನೆಗಳಿಗೆ ಕಾರಣ ಎನ್ನುವುದೂ ನನಗೆ ತಿಳಿದಿದೆ ಎಂದವರು ಬಿಜೆಪಿ ನಾಯಕರ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಗಂಗಾ ಕಲ್ಯಾಣ ಹಗರಣ, ಬಿಟ್ ಕಾಯಿನ್ ಹಗರಣ, KKRDB ಹಗರಣ, ಕೋವಿಡ್ ಹಗರಣ, PSI ಹಗರಣಗಳನ್ನು ಜನರ ಮುಂದಿಟ್ಟಿದ್ದನ್ನು ಬಿಜೆಪಿಗರಿಗೆ ಸಹಿಸಲಾಗುತ್ತಿಲ್ಲ. RSS ನವರನ್ನು ಸೈದ್ದಂತಿಕ ನೆಲೆಗಟ್ಟಿನಲ್ಲಿ ಬೆತ್ತಲುಗೊಳಿಸುತ್ತಿರುವುದೂ ಸಹ ಬಿಜೆಪಿಗರ ಈ ಅಸಹನೆಗೆ ಪ್ರಮುಖ ಕಾರಣ ಎಂದು ಪ್ರಿಯಾಂಕ್ ಖರ್ಗೆ ದೂರಿದ್ದಾರೆ.
ಸಾಮಾಜಿಕ ಮಾಧ್ಯಮ ‘X’ನಲ್ಲಿ ಪೋಸ್ಟ್ ಹಾಕಿರುವ ಪ್ರಿಯಾಂಕ್ ಖರ್ಗೆ, ‘ಈ ಹಿಂದೆ ಕಾನ್ವೆಂಟ್ ದಲಿತ ಎಂದಿದ್ದಾರೆ. ಪ್ರಿಯಾಂಕ್ ಎನ್ನುವ ಹೆಸರು ಹೆಣ್ಣೋ ಗಂಡೋ ಗೊತ್ತಿಲ್ಲ ಎಂದಿದ್ದಾರೆ. ದೇಹ ಬೆಳದಿದೆ, ಬುದ್ದಿ ಬೆಳೆದಿಲ್ಲ ಎಂದಿದ್ದಾರೆ. ಬಿಜೆಪಿಯ ಅಭ್ಯರ್ಥಿ ನನ್ನ ಕುಟುಂಬವನ್ನು ಮುಗಿಸುತ್ತೇನೆ ಎಂದು ಸಂಚು ರೂಪಿಸಿದ್ದಾರೆ. ಬಿಜೆಪಿಯವರನ್ನು ಪ್ರಶ್ನಿಸುವ ಕಾರಣಕ್ಕೆ ಪೈಲ್ಸ್ ಬಂದಿದೆ ಎಂದಿದ್ದಾರೆ. ಹಾಲು ಜಾಸ್ತಿ ಕುಡಿದಿದ್ದೇನೆ ಎಂದಿದ್ದಾರೆ,
ಈಗ ಹೊಸದಾಗಿ ನಾಯಿ ಎಂಬ ಪದವನ್ನೂ ಬಳಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಕೀಯವಾಗಿ, ಸೈದ್ದಂತಿಕವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗದೆ ಅಸಹಾಯಕ ಸ್ಥಿತಿಯಲ್ಲಿರುವ ಬಿಜೆಪಿಯವರು ನನ್ನ ವಿರುದ್ಧದ ವೈಯಕ್ತಿಕ ದಾಳಿಯಲ್ಲಿ ತೃಪ್ತಿ ಕಾಣುತ್ತಿದ್ದಾರೆ!
ಬಿಜೆಪಿಯವರ ದ್ವೇಷದ ಹೇಳಿಕೆಗಳು ನನಗೆ ಹೊಸದಲ್ಲ, ನಾನು ಇವರ ಹಗರಣಗಳನ್ನು ಬಯಲಿಗಿಟ್ಟಿದ್ದೇ ಈ ವೈಯಕ್ತಿಕ ನಿಂದನೆಗಳಿಗೆ ಕಾರಣ ಎನ್ನುವುದೂ ನನಗೆ ತಿಳಿದಿದೆ.
ಗಂಗಾ…— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 21, 2025
ಬಿಜೆಪಿಯವರ ಈ ಎಲ್ಲಾ ನಿಂದನೆಗಳು ನನ್ನ ವಿರುದ್ಧ ಅವರಿಗಿರುವ ಅಪರಿಮಿತ ಅಸಹನೆಯನ್ನು ತೋರಿಸುತ್ತದೆ. ಹೇಡಿಯ ಕೊನೆಯ ಅಸ್ತ್ರವೇ ಅಪಪ್ರಚಾರ ಮತ್ತು ವೈಯಕ್ತಿಕ ನಿಂದನೆ ಎನ್ನುವ ನಾಣ್ಣುಡಿಗೆ ಬಿಜೆಪಿಯವರೇ ಉದಾಹರಣೆಯಾಗಿದ್ದಾರೆ ಎಂದಿರುವ ಅವರು, ‘ನಾನು ಮೋದಿಯವರ ಬಗ್ಗೆ ಮಾತಾಡಬಾರದು. ರಾಷ್ಟೀಯ ವಿಷಯಗಳನ್ನು ಪ್ರಸ್ತಾಪಿಸಬಾರದು ಎನ್ನುವ ಬಿಜೆಪಿಗರು ತಮ್ಮ ಪಕ್ಷದ ಸಣ್ಣ ಪುಟ್ಟ ನಾಯಕರು, ಬಾಡಿಗೆ ಭಾಷಣಕಾರರು, ವಕ್ತಾರರು ದೇಶ ಕಂಡಂತಹ ಮಹಾನ್ ನಾಯಕರಾದ ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ, ನೆಹರುಯವರ, ಬಗ್ಗೆ ಮಾತಾಡಬಹುದು. ದೇಶದ ಆರ್ಥಿಕತೆ, ರಕ್ಷಣೆ, ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಮಾತಾಡಬಹುದು, ದೊಡ್ಡ ವಿಷಯಗಳ ಬಗ್ಗೆ, ದೊಡ್ಡವರ ಬಗ್ಗೆ ಅವರು ಮಾತನಾಡಿದರೆ ಮೇಧಾವಿಗಳು, ನಾನು ಮಾತಾಡಿದರೆ “ನಾಯಿ”! ಮಾಜಿ ಮುಖ್ಯಮಂತ್ರಿಯ ಮಗ ಬಿಜೆಪಿಯ ರಾಜ್ಯಾಧ್ಯಕ್ಷರಾದರೆ ಅರ್ಹತೆ, ನಾನು ಮೂರು ಚುನಾವಣೆ ಎದುರಿಸಿ ಜನರಿಂದ ಆಯ್ಕೆಯಾಗಿ ಸ್ಥಾನ ಪಡೆದರೆ ಕುಟುಂಬದ ಪ್ರಭಾವ! ಬಿಜೆಪಿಯವರ ಲಾಜಿಕ್ ಚೆನ್ನಾಗಿದೆ!’ ಎಂದು ಬರೆದುಕೊಂಡಿದ್ದಾರೆ.
ಇದೇ ಮೆಲ್ಮನೆ ವಿಪಕ್ಷ ನಾಯಕರು ಒಂದು ಸವಾಲು ಎಸೆದಿದ್ದರು, ಆ ಸವಾಲಿಗೆ ನಾನು ಪುರಾವೆ ಒದಗಿಸಿದ್ದೆ, ಅವರು ರಾಜೀನಾಮೆ ಕೊಟ್ಟು ನೈತಿಕತೆ ಪ್ರದರ್ಶಿಸುವ ಬದಲು ವೈಯಕ್ತಿಕ ದಾಳಿಯ ಮೊರೆ ಹೋಗಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ನಡೆಯುತ್ತಿರುವ ಈ ದೇಶದಲ್ಲಿ ಯಾರೂ ಪ್ರಶ್ನಾತೀತರಲ್ಲ, ಪ್ರಶ್ನಿಸುವುದು, ಹಕ್ಕನ್ನು ಪ್ರತಿಪಾಧಿಸುವುದು ಪ್ರಜಾಪ್ರಭುತ್ವದ ಮೂಲ ಲಕ್ಷಣ.
ಇಲ್ಲಿ ಎಲ್ಲರೂ ಸಮಾನರು ಎಂಬ ಅಂಬೇಡ್ಕರ್ ಅವರ ಆಶಯವನ್ನು ಸಂಘ ಪರಿವಾರಕ್ಕೆ ತಮ್ಮನ್ನು ತಾವು ಅಡ ಇಟ್ಟುಕೊಂಡಿರುವ “ಮನುವಾದಿ ನಾರಾಯಣಸ್ವಾಮಿ”ಯವರು ಮಣ್ಣು ಪಾಲು ಮಾಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಮೇಲಿನವನು, ಕೆಳಗಿನವನು, ಪ್ರಶ್ನೆ ಮಾಡಬಾರದವನು, ಪ್ರಶ್ನಾತೀತನು ಎಂಬುದು ಮನುವಾದದ ಮೂಲ ಲಕ್ಷಣ, ಇದನ್ನು ಯಥಾವತ್ ಆಗಿ ಪಾಲಿಸುತ್ತಿದ್ದಾರೆ ಮೇಲ್ಮನೆಯ ವಿಪಕ್ಷ ನಾಯಕರು ಎಂದು ಉದಾಹರಿಸಿರುವ ಪ್ರಿಯಾಂಕ್ ಖರ್ಗೆ, ‘ಒಂದೇ ಒಂದು ಚುನಾವಣೆ ಎದುರಿಸದ ಬಿಜೆಪಿಯ ಮೇಲ್ಮನೆ ವಿಪಕ್ಷ ನಾಯಕರಿಗೆ 3 ಬಾರಿ ಜನರ ವಿಶ್ವಾಸ ಪಡೆದು ಗೆದ್ದಿರುವ ನನ್ನ ಬಗ್ಗೆ ಮಾತಾಡುವ ಯೋಗ್ಯತೆಯೂ ಇಲ್ಲ, ಅರ್ಹತೆಯೂ ಇಲ್ಲ.
ಮೊದಲು ಒಂದೇ ಒಂದಾದರೂ ಚುನಾವಣೆ ಎದುರಿಸಲಿ, ಜನಮತ ಪಡೆದು ತಮ್ಮ ಅರ್ಹತೆಯನ್ನು ಸಾಬೀತುಪಡಿಸಲಿ, ನಂತರ ನನ್ನ ಬಗ್ಗೆ ಮಾತಾಡಲಿ’ ಎಂದು ಎದಿರೇಟು ನೀಡಿದ್ದಾರೆ.