ದೊಡ್ಡಬಳ್ಳಾಪುರ : ನಗರ ಸಮೀಪದ ರಾಮಯ್ಯನಪಾಳ್ಯ ಬಳಿ ನಡೆದ ಅಪಘಾತ ಪ್ರಕರಣದಲ್ಲಿ ಇಬ್ಬರು ಯುವಕರನ್ನು ಬಲಿ ಪಡೆದು ಪರಾರಿಯಾಗಿದ್ದ ಲಗೇಜ್ ಆಟೋವನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಕ್ ಸವಾರರಿಗೆ ಗುದ್ದಿ ಓಡಿ ಹೋಗಿದ್ದ ಆಟೋ ಹಾಗೂ ಆರೋಪಿಯನ್ನು ಸಿಸಿಟಿವಿ ಫೂಟೇಜ್ ಆಧಾರದಲ್ಲಿ, ಪತ್ತೆ ಮಾಡಿ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ..
ಕೊಡಿಗೇಹಳ್ಳಿ ಮೂಲದ ವ್ಯಕ್ತಿಯೊಬ್ಬರು ಮಗನ ಹೆಸರಿನಲ್ಲಿರುವ ತರಕಾರಿ ಹೊತ್ತು ತರುವ ಲಗೇಜ್ ಆಟೋವನ್ನು ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿ ಹೆಸರಲ್ಲಿ ವಾಹನ ಚಾಲನೆ ಪರವಾನಗಿ ಹಾಗೂ ಇತರೆ ಯಾವುದೇ ದಾಖಲೆಗಳು ಇರಲಿಲ್ಲ ಎಂದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಇಬ್ಬರು ಯುವಕರ ತಲೆ ಹಾಗೂ ಎದೆ ಮೇಲೆ ಆಟೋ ಹರಿದಿದ್ದು, ಇದರ ಪರಿಣಾಮ ಯುವಕರು ಪ್ರಾಣಬಿಟ್ಟಿದ್ದರು. ಅಪಘಾತವಾದ ಕೂಡಲೇ ಜೀವ ಭಯದಿಂದ ಆಟೋ ಚಾಲಕ ಆಟೋ ಸಮೇತ ಚಿಕ್ಕಬಳ್ಳಾಪುರದ ಪರಾರಿಯಾಗಿಡ್ಡ. ಸಿಸಿಟಿವಿ ಆಧಾರದ ಮೇಲೆ ಚಿಕ್ಕಬಳ್ಳಾಪುರದ ಆರ್‌ಎಂಸಿಗೆ ಭೇಟಿ ಕೊಟ್ಟು ಪರಿಶೀಲಿಸಿದ ಪೊಲೀಸರಿಗೆ ಆರೋಪಿ ಬಗ್ಗೆ ಸುಳಿವು ಸಿಕ್ಕಿದೆ. ಆರೋಪಿ ಕೊಡಿಗೇಹಳ್ಳಿಯವನು ಎಂದು ಗೊತ್ತಾಗಿ ಆಟೋ ಹಾಗೂ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.



























































