ಇದು ಘೋರಿ ಕಾಲವಲ್ಲ.. ಇದು ಟಿಪ್ಪು ಕಾಲವೂ ಅಲ್ಲ.. ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ತಿರುಗಿಬಿದ್ದ ಸಂಘ ಪರಿವಾರದ ಮುಖಂಡರು.. ಅಧಿಕಾರಿಗಳ ವಿರುದ್ದ ಮುಂದುವರಿದ ಆಕ್ರೋಶ..
ಮಂಗಳೂರು: ದೇವಸ್ಥಾನ ವಿಚಾರದಲ್ಲಿ ಸಂಘ ಪರಿವಾರವದಿಂದ ರಕ್ಷಣಾ ಕೈಂಕರ್ಯ ನಡೆದರೆ, ಇನ್ನೊಂದೆಡೆ ರಾಜ್ಯದ ಬಿಜೆಪಿ ಸರ್ಕರದಿಂದ ಹಿಂದೂ ವಿರೋಧಿ ನಡೆ ಅನುಸರಿಸಲಾಗುತ್ತಿದೆ ಎಂಬ ಆರೋಪ ಸಂಘದ ಕಾರ್ಯಕರ್ತರದ್ದು. ಕೆಲವು ದಿನಗಳ ಹಿಂದೆ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ದಕ್ಷಿಣಕನ್ನಡ ಜಿಲ್ಲೆ ಕಾರಿಂಜೆ ದೇವಸ್ಥಾನ ಬಳಿ ಸರ್ಕಾರದ ವಿರುದ್ದ ಬೃಹತ್ ಸಮಾವೇಶ ಮೂಲಕ ಶಕ್ತಿ ಪ್ರದರ್ಶನ ನಡೆದಿತ್ತು. ಇದೀಗ ಅಧಿಕಾರಿಗಳ ಮತ್ತೊಂದು ವರಸೆಯಿಂದ ಕೆರಳಿರುವ ಹಿಂದೂ ಸಂಘಟನೆ ಮತ್ತೆ ಹೋರಾಟದ ಅಖಾಡಕ್ಕೆ ಧುಮುಕಿದೆ.
ಏನಿದು ಹೊಸ ವಿವಾದ..?
ಕರಾವಳಿಯ ಪುರಾಣ ಪ್ರಸಿದ್ದ ಕಾರಿಂಜೇಶ್ವರ ದೇವಸ್ಥಾನ ಸಮೀಪ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿರುವ ಹಿಂದೂ ಸಂಘಟನೆಗಳು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧವೇ ಸಿಡಿದೆದ್ದಿವೆ. ಕೆಲವು ದಿನಗಳ ಹಿಂದೆ ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯಾದರ್ಶಿ ಜಗದೀಶ್ ಕಾರಂತ್ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸಿರುವ ಸಂಘ ಪರಿವಾರ, ದೇವಾಲಯ ಸಂರಕ್ಷಣೆ ಸಂಬಂಧ ಅಕ್ರಮ ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿತ್ತು. ಈ ಸಂಬಂಧ ನಿರ್ಧಾರ ಕೈಗೊಳ್ಳಲು ಹಿಂದೂ ಜಾಗರಣಾ ವೇದಿಕೆಯು ಸರ್ಕಾರಕ್ಕೆ ಡಿಸೆಂಬರ್ 20ರ ಗಡುವು ನೀಡಿದೆ.
ಈ ನಡುವೆ, ಸಿಡಿದೆದ್ದಿರುವ ಹಿಂದೂ ಕಾರ್ಯಕರ್ತರ ವಿರುದ್ದ ಪೊಲೀಸರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಕಾರಿಂಜೇಶ್ವರ ದೇಗುಲ ಬಳಿ ಹಾಕಲಾಗಿರುವ ಭಗವಾಧ್ವಜವನ್ನು ತರವುಗೊಳಿಸಲು ಪೊಲೀಸ್ ಅಧಿಕಾರಿ ತಾಕೀತು ಮಾಡಿದ್ದಾರೆ ಎಂಬುದು ಹಿಂದೂ ಜಾಗರಣಾ ವೇದಿಕೆ ಮುಖಂಡರ ಆರೋಪ.
ಈ ಕುರಿತಂತೆ ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿರುವ ಹಿಂದೂ ಜಾಗರಣಾ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಅವರು, ಪೊಲೀಸರ ನಡೆಯನ್ನು ಆಕ್ಷೇಪಿಸಿದ್ದಾರೆ. ದೇವಾಲಯವನ್ನು ರಕ್ಷಿಸುವುದು ತಮ್ಮ ಕರ್ತವ್ಯವಾಗಿದೆ ಎಂದಿರುವ ಅವರು, ಪೊಲೀಸರ ವರ್ತನೆ ವಿರುದ್ದ ಹರಿಹಾಯ್ದಿದ್ದಾರೆ. ಒಂದು ಧ್ವಜ ತೆಗೆಯಲು ಮುಂದಾದರೆ ಸಾವಿರ ಧ್ವಜಗಳನ್ನು ಹಾಕುವುದಾಗಿ ಅವರು ತಿಳಿಸಿದ್ದಾರೆ. ಇದು ಘೋರಿ ಕಾಲವಲ್ಲ, ಟಿಪ್ಪು ಸುಲ್ತಾನ್ ಕಾಲವಲ್ಲ ಎಂಬ ಅವರ ಮಾತುಗಳು ಸರ್ಕಾರವನ್ನು ಚುಚ್ಚಿದಂತಿತ್ತು.
ಕಾರ್ಯಕರ್ತರಲ್ಲೂ ಅಸಮಾಧಾನ..
ಈ ನಡುವೆ, ಒಂದೆಡೆ, ದೇವಾಲಯ ಉಳಿಸಲು ಜಗದೀಶ್ ಕಾರಂತರ ವಿರುದ್ದ ಡಿಸಿ ದೂರು ನೀಡಿದ್ದಾರೆ ಎನ್ನಲಾಗುತ್ತಿದ್ದು, ಇನ್ನೊಂದೆಡೆ ಪೊಲೀಸ್ ಅಧಿಕಾರಿಗಳು ಮತ್ತೊಂದು ರೀತಿಯಲ್ಲಿ ಅಧಿಕಾರ ಪ್ರಯೋಗಿಸುತ್ತಿದ್ದಾರೆ ಎಂದು ಸಂಘದ ಪ್ರಮುಖರು ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಕರಾವಳಿಯವರೇ ಆದ, ಆಡಳಿತಾರೂಢ ಬಿಜೆಪಿಯ ರಾಜ್ಯಾಧ್ಯಕ್ಷರಾಗಲೀ, ಸಂಸದರಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ ನಮ್ಮ ಹೋರಾಟಕ್ಕೆ ಧ್ವನಿಗೂಡಿಸುತ್ತಿಲ್ಲ ಎಂಬುದು ಹಲವರ ಬೇಸರದ ನುಡಿ.
ಈ ನಡುವೆ ದೇವಾಲಯದಲ್ಲಿನ ಭಗವಾಧ್ವಜ ತೆರವು ಯತ್ನದ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾ ಪೊಲೀಸ್ ವರಿಷ್ಠರಿಂದ ಮಾಹಿತಿ ಪಡೆದಿದ್ದಾರೆನ್ನಲಾಗಿದೆ. ದೇವಾಲಯಗಳಲ್ಲಿನ ಧ್ವಜಗಳನ್ನು ತರವುಗೊಳಿಸದಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಶಾಸಕರ ಕಚೇರಿ ಮೂಲಗಳು ತಿಳಿಸಿವೆ