ನವದೆಹಲಿ: ಕಠಿಣ ವ್ಯಾಯಾಮಗಳು, ವಿಶೇಷವಾಗಿ ಪ್ರತಿರೋಧ ತರಬೇತಿ (RT) ಮತ್ತು ಹೆಚ್ಚಿನ ತೀವ್ರತೆಯ ಮಧ್ಯಂತರ ತರಬೇತಿ (HIIT), ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗಬಹುದು ಎಂದು ಹೊಸ ಸಂಶೋಧನೆ ತಿಳಿಸಿದೆ.
ಆಸ್ಟ್ರೇಲಿಯಾದ ಎಡಿತ್ ಕೋವನ್ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ, ಈ ತರಬೇತಿಗಳನ್ನು ಅನುಸರಿಸಿದ ಸ್ತನ ಕ್ಯಾನ್ಸರ್ ಬದುಕುಳಿದವರ ರಕ್ತದ ಮಾದರಿಗಳು ಪ್ರಯೋಗಾಲಯದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸಿದವು. RT ಮೂಲಕ 22% ಹಾಗೂ HIIT ಮೂಲಕ 25% ಮಟ್ಟದಲ್ಲಿ ಬೆಳವಣಿಗೆ ಕಡಿಮೆಯಾದುದು ಪತ್ತೆಯಾಗಿದೆ.
RT ಸ್ನಾಯು ಮತ್ತು ಶಕ್ತಿಯನ್ನು ಹೆಚ್ಚಿಸಲು ತೂಕದಂತಹ ಬಾಹ್ಯ ಶಕ್ತಿಯನ್ನು ಬಳಸುವುದಾದರೆ, HIIT ಕಡಿಮೆ ಅವಧಿಯ ತೀವ್ರ ವ್ಯಾಯಾಮ ಮತ್ತು ಚೇತರಿಕೆ ಅವಧಿಗಳ ಸಂಯೋಜನೆಯಾಗಿದೆ. ಎರಡೂ ರೀತಿಯ ವ್ಯಾಯಾಮಗಳು ಸ್ನಾಯುಗಳಿಂದ ಮಯೋಕಿನ್ ಎನ್ನುವ ಪ್ರೋಟೀನ್ಗಳನ್ನು ಉತ್ಪಾದಿಸುತ್ತವೆ. ಇವು ಕ್ಯಾನ್ಸರ್ ವಿರೋಧಿ ಪರಿಣಾಮಗಳನ್ನು ತರುತ್ತವೆ.
“RT ಹಾಗೂ HIIT ಎರಡೂ ಸಮಾನ ಪರಿಣಾಮ ನೀಡಿದರೂ, HIIT ಮೂಲಕ ಸ್ನಾಯು ಹೆಚ್ಚಳ ಮತ್ತು ಕೊಬ್ಬಿನ ಇಳಿಕೆಗೆ ಸಂಬಂಧಿಸಿದಂತೆ ಹೆಚ್ಚು ಸ್ಪಷ್ಟವಾದ ಪ್ರಯೋಜನ ಕಂಡುಬಂದಿತು” ಎಂದು ಸಂಶೋಧಕ ಫ್ರಾನ್ಸೆಸ್ಕೊ ಬೆಟ್ಟರಿಗಾ ವಿವರಿಸಿದರು.
RT ಸ್ನಾಯು ಶಕ್ತಿ ಮತ್ತು ದ್ರವ್ಯರಾಶಿಯನ್ನು ಹೆಚ್ಚಿಸುವುದಾದರೆ, HIIT ಹೃದಯರಕ್ತನಾಳದ ಫಿಟ್ನೆಸ್ ಸುಧಾರಿಸಿ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ ಎಂದು ತಂಡ ತಿಳಿಸಿದೆ.
12 ವಾರಗಳ ತರಬೇತಿ ಕಾರ್ಯಕ್ರಮದ ಅಂತ್ಯಕ್ಕೆ ಭಾಗವಹಿಸಿದ ಎಲ್ಲರೂ ಮಯೋಕಿನ್ ಮಟ್ಟವನ್ನು ಹೆಚ್ಚಿಸಿಕೊಂಡಿದ್ದರು. “ಯಾವ ತರದ ವ್ಯಾಯಾಮ ಮಾಡಿದರೂ ಕ್ಯಾನ್ಸರ್ ವಿರುದ್ಧದ ರಕ್ಷಣಾತ್ಮಕ ಲಾಭ ದೊರೆಯುತ್ತದೆ” ಎಂದು ಬೆಟ್ಟರಿಗಾ ಹೇಳಿದರು.




























































