ಮಂಗಳೂರು: ರಾಜ್ಯದಲ್ಲಿ ಮುಂಗಾರು ಬಿರಿಸಾಗಿದ್ದು, ಕರಾವಳಿ ಮಲೆನಾಡಲ್ಲಿ ಭಾರೀ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ನಿರಂತರ ಮಳೆ ಪರಿಣಾಮವಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಜನಜೀವನ ಏರುಪೇರಾಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಶುಕ್ರವಾರವೂ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಕೆಯಲ್ಲಿ ಮಳೆ ಪರಿಣಾಮವಾಗಿ ಸರಣಿ ಅವಘಡಗಳು ಸಂಭವಿಸಿವೆ. ಧಾರಾಕಾರ ಮಳೆಯಿಂದಾಗಿ ಜನರು ಪರದಾಡುವಂತಾಗಿದೆ. ಸರಣಿ ದುರಂತಗಳು ಹಲವರನ್ನು ಬಲಿ ತೆಗೆದುಕೊಂಡಿವೆ. ಇದೇ ವೇಳೆ, ಭಾರೀ ಮಳೆ ಹಿನ್ನೆಲೆಯಲ್ಲಿ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಶುಕ್ರವಾರವೂ ರಜೆ ಮುಂದುವರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಉಡುಪಿ ಜಿಲ್ಲೆಯಲ್ಲೂ ಭಾರೀ ಮಳೆಯಿಂದಾಗಿ ನದಿ ತೀರದ ಪ್ರದೇಶಗಳಲ್ಲಿ ನೆರೆ ಆತಂಕ ಎದುರಾಗಿದೆ. ಕೊಡಗು ಜಿಲ್ಲೆಯಲ್ಲೂ ನಿರಂತರ ಮಳೆಯು ಪ್ರವಾಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಕಾವೇರಿ ತವರು, ಭಾಗಮಂಡಲದಲ್ಲಿ ನೆರೆ ಉಲ್ಬಣಗೊಂಡಿದ್ದು ರಸ್ತೆಗಳು ಮಳುಗಡೆಯಾಗಿದ್ದರಿಂದ ವಾಹನ ಸಂಚಾರ ಏರುಪೇರಾಗಿದೆ.

































































