ಹಾವೇರಿ: ಜ.6ರಿಂದ ಜ.8ರವರೆಗೆ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಏಲಕ್ಕಿ ಕಂಪಿ ಹಾವೇರಿ ನಗರವು ನವ ವಧುವರರಂತೆ ಶೃಂಗಾರಗೊಂಡಿದೆ.
ನಾಡಿನ ನಾಲ್ಕೂ ದಿಕ್ಕಿನಿಂದಲೂ ಕನ್ನಡಾಭಿಮಾನಿಗಳು ನುಡಿಜಾತ್ರೆಗಾಗಿ ಬಸ್ ಕಾರು ಬೈಕುಗಳ ಮೂಲಕ ಹಾವೇರಿ ನಗರದತ್ತ ಬರುತ್ತಿದ್ದು, ಎಲ್ಲೆಡೆ ಜನಜಂಗುಳಿ ಕಾಣುತ್ತಿದೆ.
ದಾರ್ಶನಿಕರ ನೆಲದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಹಾವೇರಿ ನಗರದ ಪೂರ್ವ, ಉತ್ತರ, ದಕ್ಷಿಣ ದಿಕ್ಕುಗಳಲ್ಲಿ ಮತ್ತು ಪುಣೆ-ಬೆಂಗಳೂರು ಬೈಪಾಸ್ ಹತ್ತಿರದಲ್ಲಿನ ಅರಟಾಳು ರುದ್ರಗೌಡರ ಮಹಾದ್ವಾರದಿಂದ ರಸ್ತೆ ಇಕ್ಕೇಲಗಳಲ್ಲಿ ಕನ್ನಡಾಭಿಮಾನಿಗಳನ್ನು ಸ್ವಾಗತಿಸುವಂತೆ ಸಾಲು ಸಾಲು ಕನ್ನಡ ಧ್ವಜಗಳು ಮತ್ತು ಕನ್ನಡ ಸಾಹಿತಿ ದಿಗ್ಗಜರ ಭಾವಚಿತ್ರ ಇರುವ ಬ್ಯಾನರುಗಳು ಎಲ್ಲೆಡೆ ರಾರಾಜಿಸುತ್ತಿವೆ. ಜನ ಪ್ರತಿನಿಧಿಗಳು ಮತ್ತು ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಸ್ವಾಗತ ಕೋರುವ ಬ್ಯಾನರುಗಳು ಸಹ ಎಲ್ಲೆಡೆ ಕಂಡು ಬರುತ್ತಿವೆ.
ಪುಣೆ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಮುಖ್ಯ ರಸ್ತೆಗಳ ತಿರುವಿನಲ್ಲಿ ಬರೆದ ಸ್ವಾಗತಾಕ್ಷರಗಳು, ಸಾಲು ಮರಗಳು ಮತ್ತು ಗೋಡೆಯ ಮೇಲಿನ ವರ್ಲಿ ಕಲೆಯ ಚಿತ್ತಾರವು ಅಕ್ಷರಶಃ ಕಣ್ಮನ ತಣಿಸುತ್ತಿವೆ.
ಮೂರು ದಿನಗಳ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ವ್ಯವಸ್ಥೆ ಮಾಡಿದ್ದಾರೆ. ಅಲ್ಲಲ್ಲಿ ಪೊಲೀಸ್ ವಾಹನಗಳು ನಿಂತಿವೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಎರಡು ಕಿ.ಮೀ ದೂರದಲ್ಲಿನ ಜಮೀನಿನಲ್ಲಿ ಬೃಹಧಾಕಾರದ ನಾಲ್ಕಾರು ವೇದಿಕೆಗಳು ಸಿದ್ಧಗೊಂಡಿವೆ. ಬೈಪಾಸ್ ನಿಂದ ಎರಡು ಕಿಮೀ ಉದ್ದಕ್ಕೂ ಹುಬ್ಬಳ್ಳಿ ಮಾರ್ಗವಾಗಿ ಬರುವ
ಕಾರು, ಬಸ್ ಮತ್ತು ಇನ್ನೀತರ ವಾಹನಗಳಿಗೆ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಹಾವೇರಿ ನಗರದಿಂದ ವೇದಿಕೆಯತ್ತ ಬರುವ ವಾಹನಗಳಿಗೆ ಅಜ್ಜಯ್ಯ ಸ್ವಾಮಿ ದೇವಸ್ಥಾನದವರೆಗೆ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ.
ಹಲವಾರು ದಶಕಗಳ ಐತಿಹ್ಯದ ನುಡಿ ಜಾತ್ರೆ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕನ್ನಡ ಧ್ವಜಗಳ ಮಾರಾಟ ಕಂಡು ಬರುತ್ತಿದೆ. ದೂರದೂರದಿಂದ ಬಂದ ಕನ್ನಡಾಭಿಮಾನಿಗಳು ವೇದಿಕೆ ಅಂದಗೊಳಿಸುವ, ನಾಡಧ್ವಜ ಕಟ್ಟುವ, ವಿದ್ಯುದೀಪ ಅಳವಡಿಸುವ, ಊಟ ಉಪಹಾರ ಸಿದ್ಧಪಡಿಸುವ ನಾನಾ ಕಾರ್ಯಗಳ ಮೂಲಕ ಕನ್ನಡಮ್ಮನ ಸೇವೆಯಲ್ಲಿ ನಿರತರಾಗಿರುವುದು ಕಂಡು ಬರುತ್ತಿದೆ.