📝 ಮುರುಗೇಶ್ ಆರ್ ನಿರಾಣಿ
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು
ಕರ್ನಾಟಕ ಸರ್ಕಾರ
ನಮ್ಮ ಪೂರ್ವಜರ ತ್ಯಾಗದ ಫಲ ಈ ಸ್ವಾತಂತ್ರ್ಯ. ಅವರ ಬಲಿದಾನವನ್ನು ಸ್ಮರಿಸುತ್ತ ಮುಂದಿನ ಪೀಳಿಗೆಗೆ ಉತ್ತಮ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಹೊಣೆ. ಪ್ರತಿಯೊಬ್ಬರಿಗೂ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು!
1947 ಆಗಸ್ಟ್ 15 ಮಧ್ಯರಾತ್ರಿ 12 ಗಂಟೆಗೆ ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತವಾಯಿತು. ಸುಮಾರು 200 ವರ್ಷಗಳ ಕಾಲ ನಮ್ಮ ಹಕ್ಕಾದ ಸ್ವಾತಂತ್ರ್ಯ ಪಡೆಯಲು ಅಸಂಖ್ಯಾತ ಜನ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಬಲಿದಾನ-ತ್ಯಾಗದಿಂದಲೇ ನಮಗೆ ಸ್ವಾತಂತ್ರ್ಯ ಸಿಕ್ಕಿದೆ.
ಸ್ವಾತಂತ್ರ್ಯವು ದೇವರು ನಮಗೆ ನೀಡಿದ ವರ. ನಮ್ಮಿಂದ ಈ ವರವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನಾವೆಲ್ಲರೂ ಈ ದಿನವನ್ನು ಸಂಭ್ರಮಿಸೋಣ.
75 ವರ್ಷಗಳ ಹಿಂದೆ ಆಗಸ್ಟ್ 15 ರಂದು ಪರಕೀಯರ ಆಡಳಿತದ ಅಂಧಕಾರದಿಂದ ಸ್ವಾತಂತ್ರ್ಯದ ಹೊಸ ಬೆಳಕಿಗೆ ಭಾರತ ತನ್ನನ್ನು ತೆರೆದುಕೊಂಡಿತು.
ಅದು ಶತಮಾನಗಳ ಕಾಲದ ವಸಾಹತುಷಾಹಿ ಪ್ರಭುತ್ವಕ್ಕೆ ಇತಿಶ್ರೀ ಹಾಡಿ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳುತ್ತೇವೆ ಎಂದು ಈ ದೇಶದ ಪ್ರಜೆಗಳು ಒಕ್ಕೊರಲ ದನಿಯಿಂದ ನಿರ್ಧರಿಸಿದ ಅಮೃತ ಘಳಿಗೆ.
ಸ್ವಾತಂತ್ರ್ಯವು ಬಣ್ಣಗಳು ಅಥವಾ ಆಕಾರಗಳನ್ನು ನೋಡುವುದಿಲ್ಲ. ಈಗಾಗಲೇ ಜಗತ್ತಿನಲ್ಲಿ ಸಾಕಷ್ಟು ದ್ವೇಷ ಮತ್ತು ಹಿಂಸೆಯಿದೆ ಅವುಗಳ ನಡುವೆ ಈಗ ನಾವು ಪ್ರೀತಿ, ಏಕತೆ ಮತ್ತು ತಿಳುವಳಿಕೆಯಿಂದ ಉತ್ತಮ ಭವಿಷ್ಯವನ್ನು ನಿರ್ಮಿಸಬೇಕಾಗಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಪಾತ್ರ ಅವಿಸ್ಮರಣೀಯ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ,, ವೀರರಾಣಿ ಕಿತ್ತೂರು ಚೆನ್ನಮ್ಮ, ಬೂದಿ ಬಸಪ್ಪ ನಾಯಕ, ಸುರಪುರದ ವೆಂಕಟಪ್ಪ ನಾಯಕ, ಕೊಡಗಿನ ಸ್ವಾಮಿ ಅಪರಾಂಪರ ಮೊದಲಾದ ಧೀರ ಹೋರಾಟಗಾರರ ಬಲಿದಾನವನ್ನು ನಾವು ಈ ದಿನ ಸ್ಮರಿಸಬೇಕು.
ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶ ನಮ್ಮದು. ಹಿರಿಯರ ತ್ಯಾಗ-ಬಲಿದಾನಗಳ ಮೂಲಕ ಪಡೆದ ಸ್ವಾತಂತ್ರ್ಯದಿಂದ ನಾವು ಸಾಧಿಸಿರುವುದು ಕಡಿಮೆಯೇನಲ್ಲ.
ಸ್ವಾತಂತ್ರ್ಯದ ಅರ್ಥ ಸಂಕುಚಿತವಾದುದಲ್ಲ, ವಿಶಾಲವಾದುದು. ಅದು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾದುದಲ್ಲ. ನಮ್ಮ ಭಾಷೆ, ಸಂಸ್ಕೃತಿ, ಆಹಾರ, ಉಡುಗೆ ತೊಡುಗೆ ಎಲ್ಲವೂ ನಮ್ಮ ಸ್ವಾತಂತ್ರ್ಯ. ಮತ್ತೊಬ್ಬರ ಈ ಸ್ವಾತಂತ್ರ್ಯವನ್ನು ಗೌರವಿಸುವುದು ನಿಜವಾದ ದೇಶಪ್ರೇಮ.
ಸ್ವಾತಂತ್ರ್ಯ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಬಹುಮುಖ್ಯವಾದ ಅಂಶ. ಇದನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ, ನಮ್ಮ ಸಮಾಜದ ರಕ್ಷಣೆಗೆ ಬದ್ಧರಾಗಿರೋಣ.
ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ವೀರಯೋಧರು ವೈಯಕ್ತಿಕ ಕುಟುಂಬ, ಜೀವನ, ಪ್ರೀತಿ ಅಂತಿಮವಾಗಿ ತಮ್ಮ ಪ್ರಾಣವನ್ನೂ ತ್ಯಾಗ ಮಾಡಿದ್ದಾರೆ. ಈ ದೇಶದ ಸ್ವಾತಂತ್ರ್ಯದ ಬೆಲೆ ನನಗೆ ತಿಳಿದಿದೆ. ನಾನೊಬ್ಬ ಅಪ್ಪಟ ದೇಶಭಕ್ತ, ನನ್ನ ದೇಶ, ನನ್ನ ಹೆಮ್ಮೆ.