ಬೆಂಗಳೂರು: ರಾಜ್ಯದಲ್ಲಿನ ಉಪಚುನಾವಣೆ ರಾಜಕೀಯ ವಲಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಕದನ ಕೌತುಕ ಸೃಷ್ಟಿಸಿತ್ತು. ಬಿಜೆಪಿಯಲ್ಲಿ ಯಡಿಯೂರಪ್ಪ ಪಾಳಯಕ್ಕಂತೂ ಪ್ರತಿಷ್ಠೆಯ ಕಣ ಎಂದೇ ಗುರುತಾಗಿತ್ತು. ಯಡಿಯೂರಪ್ಪ ಅವರೇ ಸೂಚಿಸಿ ಮುಖ್ಯಮಂತ್ರಿ ಗದ್ದುಗೆಯಲ್ಲಿರುವ ಬಸವರಾಜ್ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲೇ ಈ ಚುನಾವಣೆ ಏರ್ಪಟ್ಟಿರುವುದರಿಂದಾಗಿಯೇ ಮಹತ್ವ ಬಂದಿರುವುದು. ಆದರೆ ಸಿಎಂ ತವರು ಜಿಲ್ಲೆಯ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲುಂಡಿದೆ. ಅಷ್ಟೇ ಅಲ್ಲ, ಬಿಜೆಪಿ ಭದ್ರಕೋಟೆ ಛಿದ್ರವಾಗಿದ್ದೇ ಅಚ್ಚರಿ.
ಹಾನಗಲ್ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಮಾಜಿ ಸಚಿವ ಬಿಜೆಪಿ ಶಸಕ ಸಿಎಂ ಉದಾಸಿ ಅವರ ನಿಧನದಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಏರ್ಪಟ್ಟಿದೆ. ಇಲ್ಲಿ ಅನುಕಂಪದ ಅಲೆ ಇದ್ದರೂ ಬಿಜೆಪಿಗೆ ಸೋಲುಂಟಾಗಿದೆ. ಸಿಎಂ ತವರಲ್ಲೇ ಕಪಾಳಮೋಕ್ಷ ಉಂಟಾಗಿರುವುದು ಕಮಲ ಪಾಳಯದಲ್ಲಿ ತಮಳಕ್ಕೂ ಕಾರಣವಾಗಿದೆ.
ಅತ್ತ, ಯಡಿಯೂರಪ್ಪ ಕುಟುಂಬದ ವಿರುದ್ದ ಬಂಡಾಯದ ಬಾವುಟ ಹಾರಿಸುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿನಿಧಿಸುತ್ತಿರುವ ಜಿಲ್ಲೆಯಲ್ಲಿ ಕಮಲ ಪಕ್ಷ ಜಯಭೇರಿ ಭಾರಿಸಿದೆ. ಈ ಮೂಲಕ ರಾಜ್ಯ ಬಿಜೆಪಿ ಪಾಳಯದಲ್ಲಿ ಯತ್ನಾಳ್ ಆಟ ಶುವಾಗಲಿದೆಯೇ ಎಂಬ ಕುತೂಹಲ ಉಂಟಾಗಿದೆ.
ಸಿಂಧಗಿಯ ಜಿದ್ದಾಜಿದ್ದಿನ ಅಖಾಡದಲ್ಲಿ ಹೀನಾಯ ಸೋಲುಂಡಿರುವ ಜೆಡಿಎಸ್‌ಗೆ ಮುಖಭಂಗವಾದರೆ, ಅನುಕಂಪದ ಅಲೆಯ ಅನುಕೂಲ ಪಡೆಯುವ ಕಾಂಗ್ರೆಸ್ ಪ್ರಯತ್ನವೂ ಫಲಕಾಣಲಿಲ್ಲ. ಸಿಂಧಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು 31088 ಮತಗಳ ಭಾರೀ ಅಂತರದಿಂದ ದಿಗ್ವಿಜಯ ಸಾಧಿಸಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಕನಸುಗಳೂ ಭಗ್ನ..
ಜೆಡಿಎಸ್ ಶಾಸಕರಾಗಿದ್ದ ಎಂ.ಸಿ.ಮನಗೂಳಿ ನಿಧನದಿಂದ ತೆರವಾಗಿದ್ದ ಸಿಂಧಗಿ ಕ್ಷೇತ್ರದಲ್ಲಿ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರನ್ನು ಕಾಂಗ್ರೆಸ್ ಪಕ್ಷ ತನ್ನ ಗರಡಿಗೆ ಕರೆಸಿಕೊಂಡು ಸೆಣಸಾಡಲು ಅಖಾಡಕ್ಕಿಳಿಸಿತ್ತು. ಆದರೆ ಕಾಂಗ್ರೆಸ್ ನಿರೀಕ್ಷೆ ಹುಸಿಯಾಯಿತು. ಅಷ್ಟೇ ಅಲ್ಲ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಐದನೇ ಬಾರಿ ಕ್ಷೇತ್ರದಲ್ಲಿ ನಿರಂತರ ಸೋಲು ಅನುಭವಿಸಿದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಹಿತ ಜೆಡಿಎಸ್ ನಾಯಕರನೇಕರು ತಮ್ಮ ಪಕ್ಷದ ಹುರಿಯಾಳು ನಾಜಿಯಾ ಅಂಗಡಿ ಅವರನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ. ಈ ಕ್ಷೇತ್ರ ಈ ವರೆಗೂ ಜೆಡಿಎಸ್ ಕೈಯಲ್ಲಿತ್ತು. ಆದರೆ ಈ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಠೇವಣಿಯನ್ನೇ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ-ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದಾರೆ.