ದೊಡ್ಡಬಳ್ಳಾಪುರ ಬಳಿ ಪೌತಿ ಫಜೀತಿ; ಪತಿ ಜೀವಂತವಾಗಿರುವಾಗಲೇ ಪತ್ನಿಯ ಹೆಸರಿಗೆ ಪೌತಿ ಖಾತೆ ಮಾಡಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು…!
ದೊಡ್ಡಬಳ್ಳಾಪುರ: ಗ್ರಾಮ ಪಂಚಾಯ್ತಿ ಸದಸ್ಯೆಯ ಗಂಡ ಜೀವಂತವಾಗಿದ್ದರೂ ನಿವೇಶನ ಮಾರಾಟ ಮಾಡುವ ಉದ್ದೇಶದಿಂದ ಸದಸ್ಯೆಯ ಹೆಸರಿಗೆ ಹಾಡೋನಹಳ್ಳಿ ಗ್ರಾ.ಪಂ. ಅಧಿಕಾರಿಗಳು ಫವತಿ ಖಾತೆ ಮಾಡಿರುವ ಆರೋಪ ಕೇಳಿಬಂದಿದೆ.
ಪೆರಮಗೊಂಡನಹಳ್ಳಿ ಗ್ರಾ.ಪಂ ಸದಸ್ಯೆ ನಂಜಮ್ಮನ ಗಂಡ ನಾಗರಾಜು ಜೀವಂತವಾಗಿದ್ದಾರೆ. ಆದರೂ 11b ಹೆಸರಿನಲ್ಲಿ ಹಾಡೋನಹಳ್ಳಿ ಗ್ರಾ.ಪಂಚಾಯ್ತಿ ಅಧಿಕಾರಿಗಳು ಪೌತಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಿರುಮಗೊಂಡನಹಳ್ಳಿ ಗ್ರಾಮದಲ್ಲಿ 1991 ರಲ್ಲಿ ಗ್ರಾಮದ ಕೆಲವು ನಿರ್ಗತಿಕರಿಗೆ ದೊಡ್ಡಬಳ್ಳಾಪುರ ತಹಶಿಲ್ದಾರ್ ಕಚೇರಿಯಿಂದ ಆಶ್ರಯ ಯೋಜನೆಯಡಿ ಖಾಲಿ ನಿವೇಶನಗಳಿಗೆ ಹಕ್ಕುಪತ್ರ ಹಂಚಿಕೆ ಮಾಡಲಾಗಿತ್ತು. ಹಂಚಿಕೆ ವೇಳೆ ಗ್ರಾಮ ಪಂಚಾಯ್ತಿ ಸದಸ್ಯೆಯ ಗಂಡ ನಾಗರಾಜು ಅವರಿಗೂ ಹಕ್ಕು ಪತ್ರ ಹಂಚಿಕೆ ಮಾಡಲಾಗಿತ್ತು ಎನ್ನಲಾಗಿದೆ. ಹಾಡೋನಹಳ್ಳಿ ಗ್ರಾ.ಪಂ ಅಧಿಕಾರಿಗಳು ಖಾತೆದಾರರ ಜೊತೆ ಕೈ ಜೊಡಿಸಿ ಸದಸ್ಯೆಯ ಹೆಸರಿಗೆ ಪೌತಿ ಖಾತೆ ಮಾಡಿದ್ದಾರೆ ಎಂದು ದೂರಲಾಗಿದೆ. .
ಈ ಸಂಬಂಧ ತಿರುಮಗೊಂಡನಹಳ್ಳಿ ಗ್ರಾಮದ ಹರ್ಷ ಎಂಬವರು ತಾ.ಪಂ ಇಓ ಗೆ ದೂರು ನೀಡಿದ್ದಾರೆ ಎನ್ನಲಾಗಿದ್ದು, ಆ ದೂರಿನ ಪ್ರತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಅಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಅಕ್ರಮ ಖಾತೆಯನ್ನು ಕೂಡಲೆ ವಜಾ ಮಾಡಿ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ.























































