ಉಡುಪಿ: ಅನ್ನ ದಾಸೋಹ, ಅಕ್ಷರ ದಾಸೋಹ ಮೂಲಕ ಅನೇಕ ಶ್ರೇಷ್ಠರು ನಡೆದಾಡುವ ದೇವರಾಗಿ ಗುರುತಿಸಿಕೊಂಡಿದ್ದುಂಟು. ಆದರೆ ಕರಾವಳಿ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಅನ್ನ ದಾಸೋಹ, ಅಕ್ಷರ ದಾಸೋಹದ ಜೊತೆಗೆ ಬಡವರ ಪಾಲಿಗೆ ಉದ್ಯೋಗದಾತ, ಆಶ್ರಯದಾತರಾಗಿಯೂ ಗಮನಸೆಳೆದಿದ್ದಾರೆ. ಬೆಂಗಳೂರಿನ ಖ್ಯಾತ ಉದ್ಯಮಿ, ‘ಶೆಫ್ ಟಾಕ್’ ಕಂಪನಿಯ ಮಾಲೀಕ ಗೋವಿಂದ ಬಾಬು ಪೂಜಾರಿಯವರು ಇದೀಗ ಕರಾವಳಿ ತೀರದ ಜಿಲ್ಲೆಗಳ ಪಾಲಿಗೆ ಆಪತ್ಬಾಂದವ.
ಇವರ ಈ ಸೇವೆಯ ಖ್ಯಾತಿಗೆ ಗರಿ ಇಟ್ಟಿದ್ದು ಇಂದಿನ ಅನನ್ಯ ಕಾರ್ಯಕ್ರಮ.
ಎಲ್ಲರೂ ತಮ್ಮ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಅಥವಾ ಅದ್ಧೂರಿ ಔತಣ ಕೂಟ, ಇಲ್ಲವೇ ಸ್ಪೆಷಲ್ ಪಾರ್ಟಿ ಮೂಲಕ ಆಚರಿಸಿಕೊಳ್ಳುವುದುಂಟು. ಆದರೆ ಈ ಉದ್ಯಮಿ ಬಡವರಿಗೆ ಮನೆ ಕಟ್ಟಿ ಕೊಡುವ ಮೂಲಕ ವಿಶಿಷ್ಠವಾಗಿ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲೆ ಬೈಂದೂರು ಮೂಲದ ಗೋವಿಂದ ಬಾಬು ಪೂಜಾರಿಯವರು ಉಪ್ಪುಂದ ಸಮೀಪದ ಕಾನಸವಾಡಿ ಗ್ರಾಮದ ವಿಜಯ ರಮೇಶ್ ಎಂಬವರ ಬಡ ಕುಟುಂಬಕ್ಕೆ ಮನೆ ಕಟ್ಟಿಸಿ, ತಮ್ಮ ಹುಟ್ಟು ಹಬ್ಬದ ದಿನವಾದ ಇಂದು ಸಮರ್ಪಿಸಿದ್ದಾರೆ. ಈ ಮೂಲಕ ಇಡೀ ನಾಡಿಗೆ ಮಾದರಿಯಾಗಿದ್ದಾರೆ.
ಸೂರಿನ ಕಥೆಯ ಹಿಂದಿದೆ ರೋಚಕತೆ..
ಬಡವರ ಬಗ್ಗೆ ಪ್ರೀತಿ ಎಂದೇನಲ್ಲ. ಜನರಿಂದ ಹೊಗಲಿಕೆ ಬಯಸುವ ಹಂಬಲವೂ ಅವರಿಗಿಲ್ಲ. ದಶಕಗಳ ಹಿಂದೆ ಬಡತನದ ಬೇಗೆಯಲ್ಲಿದ್ದ ತಾನು ಅದರಿಂದ ಹೊರಗೆ ಬಂದಿದ್ದರೂ ತನ್ನೂರಿನವರ, ಈಗ ಬಡತನದಲ್ಲಿರುವವರ, ಸಂಕಷ್ಟದ ಸುಳಿಯಲ್ಲಿರುವ ಜನರ ಬಗ್ಗೆ ಅದೇನೋ ವಿಶೇಷ ಕಳಕಳಿ. ಹಾಗಾಗಿಯೇ ಕರಾವಳಿಯ ಹಲವಾರು ಊರುಗಳಲ್ಲಿ ಸಾವಿರಾರು ಜನರಿಗೆ ಜೀವಜಲ ಒದಗಿಸಿದ್ದಾರೆ. ಹಲವಾರು ಬಡ ಕುಟುಂಬದವರಿಗೆ ಶಾಲಾ ಶಿಕ್ಷಣಕ್ಕೆ ನೆರವು, ವೈದ್ಯಕೀಯ ನೆರವನ್ನೂ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇದಕ್ಕಾಗಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ್ನು ಸ್ಥಾಪಿಸಿದ್ದಾರೆ.
ಪ್ರಸ್ತುತ ಲಾಕ್‌ಡೌನ್ ಸಂದರ್ಭದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ 6 ಸಾವಿರಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಹಾರ-ವೈದ್ಯಕೀಯ ಕಿಟ್‌ಗಳ ನೆರವಿನ ಕೈಂಕರ್ಯದಲ್ಲಿ ತೊಡಗಿದ್ದಾಗ ಕಡುಬಡತನದಲ್ಲಿರುವ ಹಲವರ ದುಸ್ತರ ಬದುಕನ್ನು ಕಂಡು ಮಮ್ಮಲ ಮರುಗಿದರಂತೆ. ಈ ವೇಳೆ, ಹಲವರಿಗೆ ಮನೆ ದುರಸ್ತಿ ಮಾಡಲು ಹಣಕಾಸಿನ ನೆರವು ನೀಡಿದರೆ, ಆಯ್ದ ಕೆಲವು ಕುಟುಂಬಗಳಿಗೆ ಮನೆ ಕಟ್ಟಿಸಿಕೊಡುವ ಸಂಕಲ್ಪ ಮಾಡಿದರು. ಈ ಸಂಗತಿಯನ್ನು ಯಾರಿಗೂ ಹೇಳದೆ, ಯಾವುದೇ ಪ್ರಚಾರವಿಲ್ಲದೆ ಸುಸಜ್ಜಿತ ಮನೆ ನಿರ್ಮಿಸಿ, ಇಂದು ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಉಪ್ಪುಂದ ಸಮೀಪದ ಕಾಸನವಾಡಿಯ ವಿಜಯ ರಮೇಶ್ ಅವರಿಗೆ ಸಮರ್ಪಿಸಿದ್ದಾರೆ. ಈ ಮನೆಗೆ ‘ಶ್ರೀ ವರಲಕ್ಷ್ಮೀ ನಿಲಯ’ ಎಂದು ಹೆಸರಿಡಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ತಮ್ಮ ಮಗುವಿನ ಹುಟ್ಟು ಹಬ್ಬ ಸಂದರ್ಭದಲ್ಲೂ ಒಂದು ಕಡು ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ಗೋವಿಂದ ಬಾಬು ಪೂಜಾರಿ ಉದ್ದೇಶಿಸಿದ್ದರು. ಆದರೆ ಲಾಕ್‌ಡೌನ್ ನಿಯಮ ಜಾರಿಯಲ್ಲಿದ್ದುದರಿಂದ ಆ ಮನೆ ಸಮರ್ಪಣಾ ಕಾರ್ಯಕ್ರಮವನ್ನು ಮುಂದೂಡಿದ್ದಾರಂತೆ.
ಇಲ್ಲಿದೆ ಇವರ ಸೇವಾ ಮಂತ್ರದ ಗುಟ್ಟು..
ಬಾಲ್ಯದಲ್ಲಿದ್ದಾಗ ಬಡತನದ ಬೇಗೆಯಲ್ಲೇ ಇದ್ದ ಗೋವಿಂದ ಬಾಬು ಪೂಜಾರಿ, ಹದಿ ಹರೆಯದಲ್ಲೇ ದೂರದ ಮುಂಬಯಿಗೆ ತೆರಳಿ ಹೊಟೇಲ್‌ನಲ್ಲಿ ದುಡಿದು, ಬಳಿಕ ತಾವೇ ಕಂಪನಿ ಕಟ್ಟಿ, ದೇಶದ ಪ್ರಮುಖ ಉದ್ಯಮಿಗಳ ಸಾಲಿಗೆ ಸೇರಿದ್ದಾರೆ. ಆದರೂ ಸರಳ ಜೀವಿಯಾಗಿ ಎಲ್ಲರ ಜೊತೆಗೆ ಗುರುತಿಸಿಕೊಳ್ಳುತ್ತಿದ್ದಾರೆ.
- ನಿರುದ್ಯೋಗ ನಿವಾರಣೆಯ ಮಂತ್ರ ಪಠಿಸುತ್ತಿರುವ ಇವರು ಈಗಾಗಲೇ ವಿವಿಧ ಉದ್ದಿಮೆ ಸಂಸ್ಥೆಗಳನ್ನು ಕಟ್ಟಿ ಆರೇಳು ಸಾವಿರ ಮಂದಿಗೆ ನೌಕರಿ ಕೊಡಿಸಿದ್ದಾರೆ.
- ಮತ್ಸ್ಯೋದ್ಯಮ ಅವಲಂಬಿತರಿಗೆ ಬೆಂಬಲವಾಗಿ ನಿಲ್ಲುವ ಜೊತೆಗೆ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಮತ್ಸ್ಯ ಬಂಧ ಯೋಜನೆ ರೂಪಿಸಿ, ಆ ಮೂಲಕ ಮೀನಿನ ಖಾದ್ಯಗಳ ತಯಾರಿಗಾಗಿ ಸಂಸ್ಥೆ ಕಟ್ಟಿದ್ದಾರೆ.
- ನಿರುದ್ಯೋಗಿ ಯವಕರಿಗೆ ಹಣಕಾಸಿನ ನೆರವು ಸಿಗುವಂತಾಗಲು ಬೆಂಗಳೂರಿನಲ್ಲಿ ಸಂತಶ್ರೇಷ್ಠ ನಾರಾಯಣ ಗುರುಗಳ ಹೆಸರಲ್ಲಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆರಂಭಿಸಿದ್ದಾರೆ.
- ಕಡಲತಡಿಯ ಗ್ರಾಮದಲ್ಲಿ ರೆಸಾರ್ಟ್ ಸ್ಥಾಪಿಸಿ, ಅಲ್ಲೂ ಯುವಕರಿಗೆ ಉದ್ಯೋಗ ನೀಡುವ ಯೋಜನೆಗೂ ಮುನ್ನುಡಿ ಬರೆದಿದ್ದಾರೆ.
ಇನ್ನೊಂದೆಡೆ, ದೇಶದಲ್ಲೇ ಅನನ್ಯ ಮತ್ತು ಅಪರೂಪ ಎಂಬಂತೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹಾ ಶೈಕ್ಷಣಿಕ ಸೇವೆಯನ್ನು ನೀಡಬೇಕೆಂಬ ಹೆಬ್ಬಯಕೆಯೂ ಅವರದ್ದಂತೆ.