ಉಡುಪಿ: ಬದುಕು ಅಂದಮೇಲೆ ಮದುವೆ ಮಾಡಿಕೊಳ್ಳಬೇಕು, ಮನೆ ಕಟ್ಟಿಕೊಳ್ಳಬೇಕು’ ಎಂಬುದು ನಾಣ್ನುಡಿ. ಆದರೆ ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿದ ಬಡಪಾಯಿಗಳ ಪಾಲಿಗೆ ಮನೆ ಎಂಬುದು ಕನಸಿನ ಮಾತು. ಕೇಂದ್ರ-ರಾಜ್ಯ ಸರ್ಕಾರಗಳು ಬಡತನ ನಿವಾರಣೆಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡರೂ ಬಹುಪಾಲು ಮಂದಿಗೆ ಅವೆಲ್ಲವೂ ಮರೀಚಿಕೆ. ಇದಕ್ಕೆ ಉದಾಹರಣೆಯಂತಿದೆ ಹಲವರ ಬದುಕು.
ಇಂತಹಾ ಪರಿಸ್ಥಿತಿಯಲ್ಲಿದ್ದ ಉಡುಪಿ ಜಿಲ್ಲೆ ಉಪ್ಪುಂದದ ಬಾಯಂಹಿತ್ಲುವಿನಲ್ಲಿ ಬೇಬಿ ಸುಬ್ಬಯ್ಯ ದೇವಾಡಿಗ ಕುಟುಂಬಕ್ಕೆ ಸಾಮಾಜಿಕ ಕಾರ್ಯಕರ್ತರೂ ಆದ ಉದ್ಯಮಿ ಗೋವಿಂದ ಬಾಬು ಪೂಜಾರಿಯವರು ಸುಂದರವಾದ ಮನೆ ನಿರ್ಮಿಸಿ ಕೊಟ್ಟು ಮಾದರಿಯಾಗಿದ್ದಾರೆ.
ಬೈಂದೂರಿನ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ನ ಮುಖ್ಯಸ್ಥರೂ ಆಗಿರುವ ಶೆಫ್ ಟಾಕ್ ಕಂಪೆನಿಯ ಮಾಲೀಕ ಗೋವಿಂದ ಬಾಬು ಪೂಜಾರಿ ತನ್ನ ಊರಾದ ಕುಂದಾಪುರದಲ್ಲಿ ಯುವಕರ ಸೈನ್ಯ ಕಟ್ಟಿ, ಹಲವಾರು ಹಳ್ಳಿಗಳ ಸಾವಿರಾರು ಕುಟುಂಬಗಳಿಗೆ ಲಾಕ್’ಡೌನ್ ವೇಳೆ ಆಹಾರ ಕಿಟ್ ವಿತರಿಸುತ್ತಿದ್ದಾಗ ಬಡಪಾಯಿ ಕುಟುಂಬದ ವೇದನೆ ಕೇಳಿ ಗೋವಿಂದ ಬಾಬು ಪೂಜಾರಿಯವರು ಮಮ್ಮಲ ಮರುಗಿದರು. ಅತಂತ್ರ ಪರಿವಾರಕ್ಕೆ ತಾನೇ ಮನೆ ಕಟ್ಟಿ ಕೊಡುವೆ ಎಂಬ ಸಂಕಲ್ಪ ಮಾಡಿ, ತನ್ನ ಪ್ರಯತ್ನದಲ್ಲಿ ಸಫಲರಾಗಿದ್ದಾರೆ.
ಈ ವಿಚಾರ ಭಾರೀ ಸುದ್ದಿಯಾಗಿದ್ದು ಇದೀಗ ಉಡುಪಿ ಸಹಿತ ಹಲವು ಊರುಗಳ ಜನರು ತಮಗೊಂದು ಮನೆಕಟ್ಟಿ ಕೊಡಿ ಎಂದು ಬಾಬು ಪೂಜಾರಿ ಬಳಿ ಅಂಗಲಾಚುತ್ತಿದ್ದಾರೆ. ತಮ್ಮ ಬಳಿ ಅಹವಾಲು ಇಟ್ಟವರಿಗೆ ನಿರಾಶೆ ಉಂಟುಮಾಡದ ಗೋವಿಂದ ಪೂಜಾರಿ, ಇದೀಗ ತಮ್ಮ ಆದಾಯದ ಒಂದು ಭಾಗವನ್ನು ಬಡಪಾಯಿಗಳಿಗೆ ಮುಡುಪಾಗಿಟ್ಟಿದ್ದಾರೆ.
ಈ ನಡುವೆ, ಉಪ್ಪುಂದ ಗ್ರಾಮದ ದಿವಂಗತ ಮಂಜುನಾಥ ಗಾಣಿಗ ಇವರ ಪತ್ನಿ ಶಾರದಾ ಗಾಣಿಗ ಇವರಿಗೆ ಮನೆ ನಿರ್ಮಾಣಕ್ಕಾಗಿ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೋವಿಂದ ಬಾಬು ಪೂಜಾರಿಯವರು ಧನ ಸಹಾಯ ನೀಡಿದ್ದಾರೆ.
ಇವರಷ್ಟೇ ಅಲ್ಲ, ಉಡುಪಿ ಜಿಲ್ಲೆ ವಂಡ್ಸೆ ಗ್ರಾಮದ ಭಾರತಿ ನಾರಾಯಣ ಪೂಜಾರಿಯವರಿಗೆ ಮನೆ ನಿರ್ಮಾಣಕ್ಕಾಗಿ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 25000 ರೂಪಾಯಿಯ ಧನ ಸಹಾಯ ನೀಡಿ ಈ ಬಡ ಕುಟುಂಬಕ್ಕೂ ಗೋವಿಂದ ಬಾಬು ಪೂಜಾರಿಯವರು ಆಧಾರವಾಗಿದ್ದಾರೆ.
ಶಿಕ್ಷಣ ದೇಗುಲದ ಮಹದಾಸೆ:
ತಮ್ಮ ಟ್ರಸ್ಟ್ ಕಾರ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡ ಉದ್ಯಮಿ ಗೋವಿಂದ ಬಾಬು ಪೂಜಾರಿ, ತಾವು ಬಡತನದಿಂದಲೇ ಬೆಳೆದವನು. ಹಾಗಾಗಿ ಬಡವರ ಕಷ್ಟ ತಿಳಿದಿದೆ. ಅಂಥವರಿಗೆ ನೆರವಾಗುವುದರಲ್ಲಿ ಖುಷಿಯಿದೆ ಎಂದಿದ್ದಾರೆ. ಶಿಕ್ಷಣ, ಧಾರ್ಮಿಕ, ಆರೋಗ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ನೆರವಾಗುವ ನಿಟ್ಟಿನಲ್ಲಿ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದು, ಇದರ ಜೊತೆಗೆ ತಾವು ಸುಮಾರು ಆರೂವರೆ ಸಾವಿರ ಮಂದಿಗೆ ಉದ್ಯೋಗ ಕೊಡಿಸಿರುವುದಾಗಿಯೂ ಹೆಮ್ಮೆಯಿಂದ ಹೇಳಿದ್ದಾರೆ. ಬಡವರಿಗಾಗಿ ಸುಸಜ್ಜಿತ ಶಾಲೆಯೊಂದನ್ನು ನಿರ್ಮಿಸುವ ಗುರಿಯನ್ನು ತಾವು ಹೊಂದಿರುವುದಾಗಿ ಗೋವಿಂದ ಬಾಬು ಪೂಜಾರಿ ಹೇಳಿದ್ದಾರೆ.