ಬೆಂಗಳೂರು: ಕೆಸ್ಸಾರ್ಟಿಸಿ ಸಹಿತ ಸಾರಿಗೆ ನಿಗಮಗಳ ನೌಕರರಿಗೆ ಸಿಹಿ ಸುದ್ದಿ. ಸಾರಿಗೆ ನೌಕರರ ಜುಲೈ ತಿಂಗಳ ವೇತನವನ್ನು ಸರಕಾರ ಬಿಡುಗಡೆ ಮಾಡಿದೆ.
ಕೊರೊನಾ ಸಂಕಷ್ಟ ಕಾಲದಲ್ಲಿ ಸಾರಿಗೆ ನಿಗಮಗಳ ನಷ್ಟಕ್ಕೊಳಗಾಗಿದ್ದರಿಂದ ನೌಕರರ ವೇತನ ಪಾವತಿ ಸಾಧ್ಯವಾಗಲಿಲ್ಲ. ಇದೀಗ ಒಟ್ಟು ವೇತನ ವೆಚ್ಚದ ಶೇ.25ರಷ್ಟನ್ನು ಸೋಮವಾರ ಬಿಡುಗಡೆಗೊಳಿಸಲಾಗಿದೆ ಎಂದು ಕೆಸ್ಸಾರ್ಟಿಸಿ ಮೂಲಗಳು ತಿಳಿಸಿವೆ.
ಒಟ್ಟು 60.82 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಈ ಪೈಕಿ ಕೆಎಸ್ಆರ್ಟಿಸಿಗೆ 27.74 ಕೋಟಿ ರೂಪಾಯಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 17.47 ಕೋಟಿ ರೂಪಾಯಿ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಗೆ 15.61 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.