ಬೆಂಗಳೂರು: ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಬದುಕು ಸವೆಸುತ್ತಿರುವ ರಾಜ್ಯದ ಆಶಾ ಕಾರ್ಯಕರ್ತೆಯರ ಬಹುಕಾಲದ ಬೇಡಿಕೆ ಈಡೇರಿಕೆಗೆ ಕಾಲ ಸನ್ನಿಹಿತವಾಗಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾದ ಸೋಮಶೇಖರ ಯಾದಗಿರಿ ಹಾಗೂ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮೀ ಅವರ ಪ್ರಯತ್ನಕ್ಕೆ ಸರ್ಕಾರದಿಂದ ಭರವಸೆ ಸಿಕ್ಕಿದೆ. ಸಂಘದ ಪ್ರಮುಖರು ಸರ್ಕಾರಕ್ಕೆ ಸಲ್ಲಿಸಿದ ಮನವಿ ಬಗ್ಗೆ ಭರವಸೆ ನೀಡಿರುವ ಅಧಿಕಾರಿಗಳು ದಸರಾ ಬಳಿಕೆ ಬೇಡಿಕೆ ಈಡೇರಿಸುವ ಸಾಧ್ಯತೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಏನಿದು ಬೆಳವಣಿಗೆ..?
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಮಟ್ಟದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ರಾಜ್ಯದ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಸಲು ಕೋರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಯಾದಗಿರಿ ಹಾಗೂ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮೀ ಅವರು ಆರೋಗ್ಯ ಸಚಿವ ಸುಧಾಕರ್ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
ಆಶಾ ಕಾರ್ಯಕರ್ತೆಯರು ಕಳೆದ ಒಂದೂವರೆ ವರ್ಷದಿಂದ ಕೊರೋನಾ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಗಟ್ಟುವಲ್ಲಿ, ಜನರಿಗೆ ಲಸಿಕೆ ಹಾಕಿಸುವಲ್ಲಿ ಕೊರೋನಾ ವಾರಿಯರ್ಸ್ ಆಗಿ ಪ್ರಮುಖ ಪಾತ್ರ ವಹಿಸುತಾತ್ತಾ ಬಂದಿದ್ದಾರೆ. ಇವರ ಸೇವೆಯನ್ನು ಸರ್ಕಾರ ಕೊಂಡಾಡಿ ಪ್ರಶಂಸಿಸುತ್ತಿದೆ. ಆಶಾ ಕಾರ್ಯಕರ್ತೆಯರ ಮೂಲ ಕೆಲಸಗಳಾದ ಸುಗಮ ಹೆರಿಗೆ, ಸ್ವಸ್ಥ ಮಗುವಿನ ಜನನ, ತಾಯಿ-ಶಿಶು ಆರೈಕೆಗಳ ಕುರಿತ ಸೇವೆಗಳು, ಗ್ರಾಮ ನೈರ್ಮಲ್ಯ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳ ಜೊತೆಗೆ ಹಲವಾರು ಸಮೀಕ್ಷೆಗಳನ್ನು ನಿರಂತರವಾಗಿ ಮಾಡುತ್ತಿರುವರು. ಇನ್ನೊಂದೆಡೆ ಕೋವಿಡ್-19 ಇದಕ್ಕೆ ಸಂಬಂಧಿತ ಕೆಲಸಗಳು ಹೆಚ್ಚಿವೆ. ಇತ್ತೀಚಿಗಂತೂ ಕೊರೋನಾ ವ್ಯಾಕ್ಸಿನೇಶನೇಸನ್ ಕೆಲಸಗಳನ್ನು ದಿನವಿಡೀ
ಮಾಡುವಂತಾಗಿದೆ. ಬೆಳಿಗ್ಗೆ 6ರಿಂದ ರಾತ್ರಿ 8-10 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಷ್ಟೋ ಕಡೆ ಸೂಕ್ತ ತಿಂಡಿ-ಊಟ-ನೀರಿನ ವ್ಯವಸ್ಥೆ ಇಲ್ಲದಿದ್ದರೂ ಕೆಲಸ ಮಾಡಿಸಿಕೊಳ್ಳುತ್ತಿರುವರು ಆದರೆ ಸೂಕ್ತ ಗೌರವ ಧನ ಸಿಗುತ್ತಿಲ್ಲ ಎಂಬ ಸಂಗತಿ ಬಗ್ಗೆ ಈ ಪತ್ರದಲ್ಲಿ ಗಮನಸೆಳೆದಿದ್ದಾರೆ.
ಮತ್ತೊಂದೆಡೆ, ಜನಗಳಿಂದ ಹಲ್ಲೆ, ಬೈಗುಳಗಳನ್ನು ಅನುಭವಿಸುವಂತಾಗಿದೆ. ಆದರೂ ಎದೆಗುಂದದೆಸೇವೆ ಸಲ್ಲಿಸುತ್ತಿದ್ದಾರೆ. ಡಾಟಾ ತುಂಬಿಸುವುದು, ಲಸಿಕಾ ಕೇಂದ್ರದಲ್ಲಿ ವಿವಿಧ ಕೆಲಸಗಳನ್ನು ಮಾಡಿಸುವುದು, ಸ್ವಾಬ್ ತೆಗೆಯುವ ಕೇಂದ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಆಶಾಗಳನ್ನು ಭಾಗಿ ಮಾಡಿಕೊಳ್ಳುತ್ತಿರುವರು. ಇಂತಹಾ ಸಂದರ್ಭಗಳಲ್ಲಿ ಸಾರಿಗೆ ಸಹಿತ ಎಲ್ಲಾ ಖರ್ಚುಗಳನ್ನು ಆಶಾಗಳೇ ಭರಿಸಬೇಕಿದೆ.
ಮೊಬೈಲ್, ಟ್ಯಾಬ್ ಹಾಗೂ ಡಾಟಾ ನೀಡದೇ ವಿವಿಧ ಸಮೀಕ್ಷೆಗಳನ್ನು ಮೊಬೈಲ್ ಆ್ಯಪ್ ಮೂಲಕ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಆದರೆ, ಹಗಲಿರುಳು ಮಾಡಿದರೂ ದುಡಿದಷ್ಟು ಹಣ ಕೈಗೆ ತಲುಪದಿರುವುದು ಅತ್ಯಂತ ಖೇದದ ವಿಷಯವಾಗಿದೆ. ಆಶಾ ನಿಧಿ ಮೂಲಕ ನೀಡುವ ಕೇಂದ್ರದ ಪ್ರೋತ್ಸಾಹಧನ ಹಲವಾರು ವರ್ಷದಿಂದ ಸರಿಯಾಗಿ ಪಡೆಯಲು ಆಗದಿರುವ ಬಗ್ಗೆ ಇಲಾಖೆಯ ಗಮನಕ್ಕೆ ತರಲಾಗಿದೆ. ಇಂದಿಗೂ ಸಮಸ್ಯೆ ಬಗೆಹರಿದಿರುವುದಿಲ್ಲ ಎಂಬ ಸಮಸ್ಯೆ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಆಶಾ ಕಾರ್ಯಕರ್ತೆ ದಿನಕ್ಕೆ 2-3 ಗಂಟೆ ಕೆಲಸ ಮಾಡಿದರಷ್ಟೇ ಸಾಕು ಎಂದು ಹೇಳಿ ಪ್ರಾರಂಭ ಮಾಡಿದ ಕೆಲಸವಿಂದು ದಿನವಿಡೀ ಮಾಡುವಂತಾಗಿದೆ. ಆದರೂ ದುಡಿಮೆಗೆ ತಕ್ಕ ಹಣ ಸಿಗುತ್ತಿಲ್ಲ. ಈಗಾಗಲೇ ಕೇರಳ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪದೇಶ, ಪಶ್ಚಿಮ ಬಂಗಾಳ ಇನ್ನಿತರೆ ರಾಜ್ಯಗಳಲ್ಲಿನ ಆಶಾ ಕಾರ್ಯಕರ್ತೆಯರು ಕರ್ನಾಟಕಕ್ಕಿಂತ ಹೆಚ್ಚಿನ ಗೌರವಧನ ಮತ್ತು ಇನ್ನಿತರೆ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದ ಪ್ರೋತ್ಸಾಹಧನ ಮತ್ತು ಗೌರವಧನ ಸೇರಿಸಿ, ವಿವಿಧ ರಾಜ್ಯಗಳಲ್ಲಿ ನೀಡುವಂತೆ ಕನಿಷ್ಟ ರೂ. 12000 ಆದರೂ ಇಂದಿನ ಬೆಲೆ ಏರಿಕೆ ದಿನಗಳಲ್ಲಿ ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಆದಷ್ಟು ಬೇಗನೆ ಆಶಾ ಸಂಘದ ರಾಜ್ಯ ಮಟ್ಟದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಹಕ್ಕೊತ್ತಾಯಗಳು:
- ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯದ ಪ್ರೋತ್ಸಾಹ ಧನ ಮತ್ತು ಗೌರವ ಧನ ಸೇರಿಸಿ ಕನಿಷ್ಠ ರೂ. 12000
ನಿಗದಿಗೊಳಿಸಬೇಕು. - ಕೋವಿಡ್ ಅವಧಿಯಲ್ಲಿ ವಿಶೇಷ ಕೆಲಸಗಳಿಗೆ ವಿಶೇಷ ಮಾಸಿಕ ಭತ್ಯೆ ರೂ.5000 ರಾಜ್ಯದಿಂದ ಘೋಷಿಸಿ. ಅಥವಾ ವಿವಿಧ ವಿಶೇಷ ಕೆಲಸಗಳಿಗೆ ದೈನಂದಿನ ದಿನ ಭತ್ಯೆ, ಪ್ರಯಾಣ ಭತ್ಯೆ ರೂ.500 ನೀಡಬೇಕು.
- ರಾಜ್ಯದಾದ್ಯಂತ ಆಶಾಗಳಿಗೆ ಹೆಚ್ಚುತ್ತಿರುವ ಒತ್ತಡ ತಗ್ಗಿಸಿ. ಕೋವಿಡ್ ಲಸಿಕೆ ಕೆಲಸ, ಪದೇಪದೇ ಲಸಿಕೆ ಹಾಕಿಸಿಕೊಂಡವರ ಸರ್ವೆಗಳು, ಕೋವಿಡ್-19 ರೋಗಿಗಳ ಸರ್ವೆ, ಇಲಾಖೆಯ ವಿವಿಧ ಸರ್ವೆಗಳು, ತಾಯಿ-ಮಗು ಹಾರೈಕೆ ಕೆಲಸಗಳು, ಗ್ರಾಮ ನೈರ್ಮಲ್ಯದ ಕೆಲಸಗಳು ಇತ್ಯಾದಿ ಇವುಗಳಲ್ಲಿ ನಿಗದಿತ ದಿನದಂದು ನಿಗದಿತ ಕೆಲಸ ಮಾಡಲು ಅವಕಾಶ ರೂಪಿಸಿ.
- ಕೋವಿಡ್-19 ನಿಯಂತ್ರಣ ಚಟುವಟಿಕೆಗಳಲ್ಲಿ ಡಾಟಾ ತುಂಬಿಸುವುದು, ಲಸಿಕಾ ಕೇಂದ್ರಗಳಲ್ಲಿ ವಿವಿಧ ಕೆಲಸಗಳನ್ನು ಮಾಡಿಸುವುದು. ಸ್ವಾಬ್ ತೆಗೆಯುವ ಕೇಂದ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಆಶಾಗಳನ್ನು ಭಾಗಿ ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸಿ. ಹಾಗೆಯೇ ಬಸ್ಸ್ಟ್ಯಾಂಡ್, ಕೋರ್ಟ್ ಇನ್ನಿತರೆ ಸಾರ್ವಜನಿಕ ಸ್ಥಳಗಳಿಗೆ ಆಶಾಗಳಿಗೆ ಡ್ಯೂಟಿ ಹಾಕುತ್ತಿರುವುದನ್ನು ನಿಲ್ಲಿಸಿ. ವ್ಯಾಕ್ಸಿನೇಷನ್‍ಗಾಗಿ ಆಶಾಗಳನ್ನು ವಿವಿಧ ಗ್ರಾಮಗಳಿಗೆ, ಬೇರೆ ಪ್ರದೇಶಗಳಿಗೆ ಕರೆದುಕೊಂಡು ಹೋಗುವುದು, ಯಾವುದೆ ಬದ್ರತೆ ಇಲ್ಲದೆ ಆಶಾಳನ್ನು ರಾತ್ರಿವರೆಗೆ ಕೆಲಸ ಮಾಡಿಸಿಕೊಳ್ಳುತ್ತಿರುವುದನ್ನು ನಿಲ್ಲಿಸಿ.
- ಪ್ರತೀ ವರ್ಷ ನೀಡುವ 2 ಸಮವಸ್ತ್ರಗಳು ಒಳ್ಳೆ ಗುಣಮಟ್ಟ ಇರಲಿ. ಹಾಗೂ ಈ ಹಿಂದೆ ತಿಳಿಸಿದ ಗುಲಾಬಿ ಎಪ್ರಾನ್ ಕೂಡಲೇ
ಒದಗಿಸಬೇಕು. - ಪ್ರತೀ ವರ್ಷ ಡೈರಿಯನ್ನು ನವಂಬರನಲ್ಲಿ ನೀಡಿ. ಅಥವಾ 5 ವರ್ಷಕ್ಕೆ ಆಗುವ ಡೈರಿಯನ್ನು ನಿಯಮಿತವಾಗಿ ನೀಡಬೇಕು.
- ಆಶಾ ಕಾರ್ಯಕರ್ತೆಯರಿಗೆ ಈ-ಸಮೀಕ್ಷೆ ಮಾಡಲು ಕೂಡಲೇ ಮೊಬೈಲ್/ಟ್ಯಾಬ್ ಜೊತೆ ಡಾಟಾ ಒದಗಿಸಬೇಕು.
- ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವಂತೆ ಆಶಾ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಿ- ಸೇವೆಯಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ತೀವ್ರ
ಕಾಯಿಲೆಗೆ ಒಳಗಾದಲಿ ಮತ್ತು ಅಪಘಾತಕ್ಕೀಡಾದಲ್ಲಿ ಉಚಿತ ಚಿಕಿತ್ಸೆ ಮತ್ತು ಪರಿಹಾರ ನೀಡಬೇಕು. - ಈ ಹಿಂದಿನ ಮುಖ್ಯಮಂತ್ರಿಗಳು ಆಶಾಗಳಿಗೆ ಘೋಷಿಸಿದ ದೀಪಾವಳಿ ಉಡುಗೊರೆ ಎಂದ ಸೀರೆಗಳನ್ನು ಆಶಾಗಳಿಗೆ ನೀಡಲು
ಸೂಕ್ತಕ್ರಮ ಕೈಗೊಳ್ಳಬೇಕು. - ಕೋವಿಡ್ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 20 ಹೆಚ್ಚು ಆಶಾ ಕಾರ್ಯಕರ್ತೆಯರು ಸಾವಿಗೀಡಾಗಿದ್ದಾರೆ. ಈಗಾಗಲೇ ಘೋಷಿಸಿರುವಂತೆ ರೂ. 50 ಲಕ್ಷ ಪರಿಹಾರವನ್ನು ಅವರ ಕುಟುಂಬಗಳಿಗೆ ಕೂಡಲೇ ಒದಗಿಸಬೇಕು.