ಬೆಂಗಳೂರು: ಮುಂದಿನ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಸೃಷ್ಟಿ ಹಾಗೂ ಬಂಡವಾಳ ಹೂಡಿಕೆ ಮತ್ತು ಕೈಗಾರಿಕೆಗಳ ಪುನಶ್ಚೇತನ ಗುರಿಯೊಂದಿಗೆ 2022ರ ನವೆಂಬರ್ 2 ರಿಂದ 4ರವರೆಗೆ ಒಟ್ಟು ಮೂರು ದಿನಗಳ ಕಾಲ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಅಂದಾಜು 10 ಲಕ್ಷ ಉದ್ಯೋಗ ಸೃಷ್ಟಿ ಮತ್ತು ದೇಶವಿದೇಶಗಳಿಂದ ಒಂದು ಹೆಸರಾಂತ ಕಂಪನಿಗಳಿಂದ ಬಂಡವಾಳ ಹೂಡಿಕೆಯಾಗುವ ಸಂಭವವಿದೆ ಎಂದು ಹೇಳಿದರು.
ಬೆಂಗಳೂರು ಹೊರವಲಯದ ಬಿಡದಿಯ ರೆಸಾರ್ಟ್‍ನಲ್ಲಿ ಶುಕ್ರವಾರ ದಕ್ಷಿಣ ಭಾರತದ ಕಬ್ಬು ಮತ್ತು ಸಕ್ಕರೆ ತಂತ್ರಜ್ಞಾನ 50ನೇ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿಯೊಂದು ವಿಭಾಗದಲ್ಲೂ ಕೈಗಾರಿಕಾ ಪ್ರದೇಶದಲ್ಲೇ ಕಾರ್ಮಿಕರ ಅನುಕೂಲಕ್ಕಗಿ ಇಎಸ್‍ಐ ಆಸ್ಪತ್ರೆಗಳನ್ನು ತೆರೆಯಬೇಕೆಂಬ ಯೋಜನೆಯನ್ನು ರೂಪಿಸುತ್ತಿದ್ದೇವೆ. ಈಗಾಗಲೇ ಕಲಬುರಗಿಯಲ್ಲಿ ಒಂದು ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಇದನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಕೈಗಾರಿಕಾ ಉದ್ದೇಶಗಳಿಗೆ ಬಳಸುತ್ತಿರುವ ಕೃಷಿ ಜಮೀನಿನ ಪ್ರಮಾಣ ಕಳೆದ 70 ವರ್ಷಗಳಿಂದ ಶೇ.0.48ನಷ್ಟಿದೆ. ಶೇ.1ರಷ್ಟನ್ನು ತಲುಪಬೇಕಾದರೆ ಇನ್ನು 10 ವರ್ಷಗಳು ಬೇಕಾಗುತ್ತದೆ ಎಂದು ಹೇಳಿದರು.
ಕೊಪ್ಪಳ, ರಾಯಚೂರು, ಧಾರವಾಡದಲ್ಲಿ ಕೈಗಾರಿಕೆಗಳ ಉದ್ದೇಶಕ್ಕಾಗಿ ಜಮೀನನ್ನು ಮೀಸಲಿಟ್ಟಿದ್ದೇವೆ. ಏಕಾಏಕಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಬಂದರೆ ತಕ್ಷಣವೇ ಜಮೀನು ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಲ್ಯಾಂಡ್ ಬ್ಯಾಂಕ್ ಮೂಲಕ ಜಮೀನನ್ನು ಮೀಸಲಿಡುವ ಪ್ರಕ್ರಿಯೆ ನಡೆದಿದೆ ಎಂದು ಮಾಹಿತಿ ನೀಡಿದರು.
ಕಳೆದ ತ್ರೈಮಾಸಿಕ ಅವಧಿಯಲ್ಲಿ ವಿದೇಶಿ ನೇರ ಹೂಡಿಕೆದಾರರ ಪೈಕಿ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ನಾವು ಕರ್ನಾಟಕವನ್ನು ಕೈಗಾರಿಕೆಯಲ್ಲಿ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ಹಾಕಿಕೊಳ್ಳಲಾಗಿದೆ ಎಂದು ವಿವರಣೆ ನೀಡಿದರು.
ಎಥಿನಾಲ್ ಬಳಸಲು ಸಚಿವರ ಕರೆ :
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ನಿರಾಣಿ, ಪ್ರಸಕ್ತ ಸಾಲಿನಲ್ಲಿ ಎಥಿನಾಲ್ ಬಳಕೆ ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದರಿಂದ ಸಕ್ಕರೆ ಪ್ರಮಾಣದ ಉತ್ಪಾದನೆಯು ನಿರೀಕ್ಷೆಗೂ ಮೀರಿದ ಗುರಿಯನ್ನು ಸಾಧಿಸಲು ಸಾದ್ಯವಾಗಿದೆ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ಸುಮಾರು 309 ಲಕ್ಷ ಟನ್ ಸಕ್ಕರೆಯನ್ನು ಉತ್ಪಾದಿಸಿದ್ದು ಇದು 35 ಲಕ್ಷ ಟನ್ ಅಧಿಕವಾಗಿದೆ. ಕಳೆದ ವರ್ಷ 274 ಲಕ್ಷ ಟನ್ ಸಕ್ಕರೆ ಉತ್ಪಾದಿಸಲಾಗಿತ್ತು. ರಫ್ತು ಪ್ರಮಾಣ ಮತ್ತು ಎಥೆನಾಲ್ ಮಿಶ್ರಣದಿಂದಾಗಿ 2020-21 ದೇಶೀಯ ಸಕ್ಕರೆ ಉದ್ಯಮಕ್ಕೆ ಶುಕ್ರದೆಸೆಗೆ ತಿರುಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಕ್ಕರೆ ಕಾರ್ಖಾನೆಗಳು ಇದುವರೆಗೆ 58 ಲಕ್ಷ ಟನ್‍ಗಳಿಗೆ ರಫ್ತು ಒಪ್ಪಂದಗಳಿಗೆ ಸಹಿ ಹಾಕಿದ್ದು, ಪ್ರಸ್ತುತ ಸಕ್ಕರೆ ಸಾಲಿನಲ್ಲಿ ಎಂಇಎಕ್ಯೂ ಯಡಿ ಸರ್ಕಾರ ನಿಗದಿಪಡಿಸಿದ 60 ಲಕ್ಷ ಟನ್‍ಗಳ ಗುರಿಯನ್ನು ಹೊಂದಿದೆ. ಬ್ರೆಜಿಲ್ ಮತ್ತು ಥೈಲ್ಯಾಂಡ್‍ನಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಕುಸಿತವಾಗಿರುವುದರಿಂದ ದೇಶವಿದೇಶದಲ್ಲಿ ಹೆಚ್ಚಿನ ಬೇಡಿಕೆ ಬಂದಿದೆ ಎಂದರು.
ಮಾಲಿನ್ಯ ಮತ್ತು ಕಚ್ಚಾ ತೈಲದ ಆಮದನ್ನು ಕಡಿಮೆ ಮಾಡಲು ಎಥೆನಾಲ್ ಮಿಶ್ರಿತ ಇಂಧನವನ್ನು ಬಳಸುವ ಸರ್ಕಾರದ ಕ್ರಮವನ್ನು ವಿವರಿಸಿದ ಅವರು, ಸಕ್ಕರೆ ಕಾರ್ಖಾನೆಗಳು ಮತ್ತು ರೈತರು ಎಥೆನಾಲ್ ಮಿಶ್ರಣದಿಂದ ಅಪಾರ ಲಾಭ ಪಡೆಯಬಹುದು ಎಂದು ಸಲಹೆ ಮಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಎಥೆನಾಲ್ ಮಿಶ್ರಣ ಕಾರ್ಯಕ್ರಮವು ಎಥೆನಾಲನ್ನು ಸ್ವದೇಶಿ ಇಂಧನವಾಗಿ ಉತ್ತೇಜಿಸುವ ಮತ್ತು ದೇಶವನ್ನು ಆತ್ಮನಿರ್ಭರ ಭಾರತವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದ ಸಚಿವ ನಿರಾಣಿ, 2019-20ರ ಎಥೆನಾಲ್ ಪೂರೈಕೆ ವರ್ಷದಲ್ಲಿ (ಇಎಸ್ವೈ) ದೇಶವು ಶೇ.5ರಷ್ಟು ಎಥೆನಾಲ್ ಮಿಶ್ರಣವನ್ನು ಸಾಧಿಸಿತು ಮತ್ತು ಎಥೆನಾಲ್ ಉತ್ಪಾದಿಸಲು 8 ಲಕ್ಷ ಟನ್ ಸಕ್ಕರೆಯನ್ನು ಬಳಸಲಾಯಿತು. ಇಎಸ್‍ವೈ 2020-21 ರಲ್ಲಿ ಎಥೆನಾಲ್ ಉತ್ಪಾದನೆಗೆ ಸಕ್ಕರೆ ಉದ್ಯಮವು 20 ಲಕ್ಷ ಟನ್‍ಗಳಿಗಿಂತ ಹೆಚ್ಚು ಬಳಸಲು ಬದ್ಧವಾಗಿದೆ. ಅಂತ್ಯದ ವೇಳೆಗೆ ಶೇ.8.5ನಷ್ಟು ಎಥೆನಾಲ್ ಮಿಶ್ರಣ ಗುರಿಯನ್ನು ಸಾಧಿಸುವ ವಿಶ್ವಾಸ ನಮಗಿದೆ. ಮತ್ತು 2022 ರ ವೇಳೆಗೆ ಶೇ.10 ಎಥೆನಾಲ್ ಮತ್ತು 2025 ರ ವೇಳೆಗೆ 20ರಷ್ಟಾಗುತ್ತದೆ ಎಂದು ಅಂಕಿಅಂಶಗಳ ವಿವರ ನೀಡಿದರು.
ಎಥೆನಾಲ್ ಉತ್ಪಾದನೆಯು ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತಾ ನಿರಾಣಿ ಇದನ್ನು ಲಾಭದಾಯಕ ಪರಿಸ್ಥಿತಿ ಎಂದು ಕರೆದರು. ಹೆಚ್ಚು ಎಥೆನಾಲ್ ಉತ್ಪಾದನೆಗಾಗಿ ಸಕ್ಕರೆಯನ್ನು ಬೇರೆಡೆಗೆ ತಿರುಗಿಸುವುದು ಸಕ್ಕರೆ ದಾಸ್ತಾನುಗಳನ್ನು ಕಡಿಮೆ ಮಾಡಲು ಮತ್ತು ನಗದು ಹರಿವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ ಮತ್ತು ಇದು ಕಬ್ಬು ಬೆಳೆಗಾರರಿಗೆ ಸಮಯಕ್ಕೆ ಸರಿಯಾಗಿ ಪಾವತಿಸಲು ಮತ್ತು ಬಾಕಿ ಇರುವ ಬಾಕಿಗಳನ್ನು ತೆರವುಗೊಳಿಸಲು ಮತ್ತು ಬ್ಯಾಂಕುಗಳಿಗೆ ಸಾಲ ಮರುಪಾವತಿಯಂತಹ ಇತರ ವೆಚ್ಚಗಳನ್ನು ಪೂರೈಸಲು ಅಗತ್ಯವಾಗುತ್ತದೆ ಎಂದು ನಿರಾಣಿ ಹೇಳಿದರು.