ಬೆಂಗಳೂರು: ಸುಪ್ರಸಿದ್ಧ ಗಮಕ ಕಲಾವಿದ, ಪದ್ಮಶ್ರೀ ಪುರಸ್ಕೃತ ಹಿರಿಯ ವಿದ್ವಾಂಸರಾದ ಶಿವಮೊಗ್ಗದ ಹೊಸಹಳ್ಳಿಯ ಕೆ.ಆರ್. ಕೇಶವಮೂರ್ತಿ ವಿಧಿವಶರಾಗಿದ್ದಾರೆ.
ಭಾರತೀಯ ಪರಂಪರಾಗತ ಗಮಕ ಕಲೆಯನ್ನು ಜೀವನದ ಉಸಿರಾಗಿಸಿಕೊಂಡಿದ್ದ ಕೇಶವಮೂರ್ತಿಯವರದ್ದು ಓರ್ವ ಕಲಾತಪಸ್ವಿಯ ಬದುಕು. ಗಮಕ ಕಲೆಯ ಮೂಲಕ ನಾಡಿನ ವಿದ್ವತ್ ಪರಂಪರೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿದ ಅಧ್ವರ್ಯು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಮೇರು ಸಾಧಕ. ಈ ವರ್ಷದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು.
ಗಮಕ ಕಲಾವಿದ ಕೆ.ಆರ್. ಕೇಶವಮೂರ್ತಿ ಅವರ ನಿಧನಕ್ಕೆ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆ ಗುರುತಿಸಿಕೊಂಡಿದ್ದ ಕೇಶವಮೂರ್ತಿ ಅವರ ನಿಧನ ಬಗ್ಗೆ ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕೂಡಾ ಶೋಕ ವ್ಯಕ್ತಪಡಿಸಿದ್ದಾರೆ. ಅವರ ವಿದ್ವತ್ತು, ಜೀವನಾನುಭವ, ತ್ಯಾಗ, ಪ್ರಾಣಿಮಾತ್ರದಲ್ಲಿ ಅವರಿಗಿದ್ದ ಪ್ರೀತಿ ಹಾಗೂ ಕರುಣೆ, ಸಮಾಜೋನ್ನತಿಯ ಬಗೆಗಿನ ಕಳಕಳಿ ಇವುಗಳನ್ನು ದೇಶ ಗುರುತಿಸಿದೆ. ಅವುಗಳು ಮುಂದಿನ ಪೀಳಿಗೆಗೆ ಆದರ್ಶದ ಉದಾಹರಣೆಯಾಗಲಿ ಎಂದವರು ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆಗೆ ಅನ್ಯೋನ್ಯ ಸಂಬಂಧ ಹೊಂದಿದ್ದ ಕೇಶವಮೂರ್ತಿಗಳು ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ನಮ್ಮ ಕಾರ್ಯದ ಮೇಲೆ ಸದಾ ಸ್ನೇಹಾಶೀಷಗಳನ್ನು ಧಾರೆಯೆರೆಯುತ್ತಿದ್ದರು. ಅವರ ಅಗಲಿಕೆ ನಮ್ಮೆಲ್ಲರಿಗೆ ದುಃಖ ತಂದಿದೆ ಎಂದಿರುವ ದತ್ತಾತ್ರೇಯ ಹೊಸಬಾಳೆ ಅವರು, ಕೇಶವಮೂರ್ತಿಯವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ನೀಡಲಿ, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರಿಗೆ, ಶಿಷ್ಯಕೋಟಿಗಳಿಗೆ, ಅಪಾರ ಅಭಿಮಾನಿಗಳಿಗೆ ಭಗವಂತನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

















































