ಬೆಂಗಳೂರು: ಕರ್ನಾಟಕದಲ್ಲಿರುವ ಪ್ರಬಲ ಸಮುದಾಯ ಪಂಚಮಸಾಲಿ ಲಿಂಗಾಯತಕ್ಕೆ 2ಎ ಮೀಸಲಾತಿ ಬೇಕೆಂಬ ಕೂಗು ಇಂದು ನಿನ್ನೆಯದಲ್ಲ. ಅದಾಗಿಯೂ ಮೀಸಲಾತಿಗಾಗಿ ಹೋರಾಟವೂ ಇಂದು-ನಿನ್ನೆಯದಲ್ಲ. ಹಲವಾರು ಬಾರಿ ಶಕ್ತಿಪ್ರದರ್ಶನ ನಡೆಸಿದರೂ ಸರ್ಕಾರ ಮಣಿದಿಲ್ಲ. ಇದೀಗ ಬ್ಯಾಲೆಟ್ ಪೇಪರ್‌ನಲ್ಲಿ ಉತ್ತರ ನೀಡುವುದಾಗಿ ‘ಪಂಚಮಸಾಲಿ ಲಿಂಗಾಯತ’ ಸಮುದಾಯ ಆಡಳಿತಾರೂಢ ಪಕ್ಷಕ್ಕೆ ರವಾನಿಸಿರುವ ಸಂದೇಶ ಮುಂದಿನ ಬೆಳವಣಿಗೆ ಬಗ್ಗೆ ಕುತೂಹಲ ಕೆರಳುವಂತೆ ಮಾಡಿದೆ.
ಈ’ನಡುವೆ, ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ಕೈಗೊಂಡಿರುವ ಕೂಡಲಸಂಗಮದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು ಈ ಬಾರಿ ಅದ್ದೂರಿ ಶಿವರಾತ್ರಿಯನ್ನು ತ್ಯಜಿಸಿ ಇಷ್ಟಲಿಂಗದ ಮೊರೆ ಹೋಗಿರುವ ಬೆಳವಣಿಗೆ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಸತ್ಯಾಗ್ರಹವೇ ಶಿವರಾತ್ರಿಯಾಯಿತು:
ಮೀಸಲಾತಿಗಾಗಿ ಹೋರಾಟ ನಡೆಯುತ್ತಿರುವ ಅಖಾಡ ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲೇ ಪಂಚಮಸಾಲಿ ಸಮುದಾಯದವರು ಶಿವರಾತ್ರಿ ಆಚರಿಸಿದರು. ಜಮಾಯಿಸಿದ್ದ ಆಸ್ತಿಕರು ಇಷ್ಟಲಿಂಗ ಪೂಜಿಸಿ ಸ್ವತಂತ್ರ್ಯ ಉದ್ಯಾನವನ್ನು ಪರ್ಯಾಯ ಕೂಡಲ ಸಂಗಮವಾಗಿಸಿದರು. ಸತ್ಯಾಗ್ರಹದ ವೇದಿಕೆಯೇ ಶಿವಾನುಭವ ಮಂಟಪದಂತಾಯಿತು.
ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುoಜಯ ಸ್ವಾಮೀಜಿ ಅವರು ತಮ್ಮ 36ನೇ ದಿನದ ಸತ್ಯಾಗ್ರಹದ ಜೊತೆಯಲ್ಲಿಯೇ 500ಕ್ಕೂ ಹೆಚ್ಚು ಭಕ್ತರೊಂದಿಗೆ ಶಿವರಾತ್ರಿ ದಿನದಂದು ಸಂಜೆ 8 ರಿಂದ ಮಧ್ಯರಾತ್ರಿ 1 ಗಂಟೆಯವರೆಗೂ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ನೂರಾರು ಮಂದಿಗೆ ಇಷ್ಟಲಿಂಗದೀಕ್ಷೆ ನೆರವೇರಿಸಿದರು.
ಸಿಎಂ ಬೊಮ್ಮಾಯಿ ಬಗ್ಗೆ ಬೇಸರ:
ಇದೇ ಸಂದರ್ಭದಲ್ಲಿ ತಾಯಿ ಮೇಲೆ ಆಣೆ ಮಾಡಿ ಸಮಾಜಕ್ಕೆ ಮೋಸ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮನಸ್ಸು ಪರಿವರ್ತನೆ ಮಾಡಿ ಮೀಸಲಾತಿ ಅನುಷ್ಠಾನಗೊಳಿಸುವ ಇಚ್ಚಾಶಕ್ತಿಯನ್ನು ಕರುಣಿಸುವಂತೆ ಪರಮಾತ್ಮನಲ್ಲಿ ಶ್ರೀಗಳು ಪ್ರಾರ್ಥಿಸಿದರು.
ಖ್ಯಾತ ವಚನ ಸಂಗೀತ ಕಲಾವಿದ ಚಿತ್ರದುರ್ಗದ ತೋಟಪ್ಪ ಉತ್ತಂಗಿ ಹಾಗೂ ಸಂಗಡಿಗರು ಸುಶ್ರಾವ್ಯವಾಗಿ ವಚನ ಸಂಗೀತ ನೆರವೇರಿಸಿದರು. ಈ ಮಹಾಪೂಜೆಯಲ್ಲಿ ಡಾ.ಬಿಎಸ್ ಪಾಟೀಲ್ ನಾಗಲ್ ಹುಲಿ, ಶಿವಪುತ್ರಪ್ಪ ಮಲ್ಲೇವಾಡ, ಪುಟ್ಟರಾಜ, ಶಿವಕುಮಾರ್ ಮೇಟಿ, ದೀಪಕ್ ಜುಂಜರವಾಡ, ಕಾಂತೇಶ್ ,ಶೈಲೇಂದ್ರ ಪಾಟೀಲ್, ಯಾದಗಿರಿ ಜಿಲ್ಲಾ ಅಧ್ಯಕ್ಷ ಮಲ್ಲನ ಗೌಡ, ಶಹಾಪುರ ತಾಲ್ಲೂಕು ಅಧ್ಯಕ್ಷ ದೇವೇಂದ್ರಪ್ಪ ತೋಟದ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುಲಿಂಗ ಪಾಟಿಲ್, ಚಿಂಚೋಳಿ ತಾಲ್ಲೂಕಿನ ಅಧ್ಯಕ್ಷ ಶರಣು, ಐಟಿ ಬಿಟಿ ಅಧ್ಯಕ್ಷ ಮಲ್ಲಪ್ಪ, ಹೊಸಕೋಟೆ ಸಂತೋಷ, ಉಷಾ ವಿಜಯ ಕುಮಾರ್ ರವದಿ, ಇಂಡಿ ತಾಲ್ಲೂಕಿನ ಸಂತೋಷ ಜೋಗುರು ಹಾಗೂ ಶ್ರೀಶೈಲ ಸಹಿತ ಅನೇಕ ಗಣ್ಯರು ಭಾಗವಹಿಸಿದ್ದರು.
ಇದನ್ನೂ ಓದಿ.. KSRTC ವಿಶಿಷ್ಠ ಪ್ರಯೋಗ.. ಪ್ರಯಾಣಿಕರಿಗಾಗಿ ‘ಅಂಬಾರಿ ಉತ್ಸವ’
https://twitter.com/unsocial2023/status/1627329368975609861?t=LEj13rfU18F7hBqsUnJLGA&s=19