ಚಾಮರಾಜನಗರ: ಅರಣ್ಯ ಇಲಾಖೆಯಲ್ಲಿ ದೀರ್ಘ ಕಾಲದ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರಿಗೆ ನ್ಯಾಯ ಸಮ್ಮತವಾದ ಸೇವಾ ಭದ್ರತೆ ಮತ್ತು ಸೂಕ್ತ ವೇತನ ಕ್ಕಾಗಿ ಅರಣ್ಯ ಇಲಾಖೆ ಮತ್ತು ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ರೂಪಿಸುವ ಅಗತ್ಯವಿದೆ ಎಂದು ರಾಜ್ಯ ವನ್ಯಜೀವಿ ವಿಭಾಗಗಳ ದಿನಗೂಲಿ ನೌಕರರ ಸಂಘದ ಗೌರವಾಧ್ಯಕ್ಷ ನಾಗರಾಜು ತಿಳಿಸಿದ್ದಾರೆ.
ಹನೂರು ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹನೂರು ತಾಲೂಕಿನ ವನ್ಯಜೀವಿ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಕ್ಷಣಾ ಶಿಬಿರಗಳಲ್ಲಿ ದಿನದ 24 ಗಂಟೆ ಕೆಲಸ ಮಾಡುವ ನೌಕರರಿಗೆ ಕೇವಲ 8 ಗಂಟೆಯ ಸಂಬಳ ನೀಡುತ್ತಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ಸಿಗುತ್ತಿಲ್ಲ. ಅಲ್ಲದೆ ದಿನಗೂಲಿ ನೌಕರರ ಮೇಲೆ ಅಧಿಕಾರಿಗಳಿಂದ ದೌರ್ಜನ್ಯ ಮತ್ತು ಶೋಷಣೆ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹುಲಿ ಸಾವಿನ ನಂತರ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತೆ ಮೈಮರೆತಿದ್ದಾರೆ. ನಮ್ಮ ನೌಕರರು ಎಲ್ಲ ರಕ್ಷಣಾ ಶಿಬಿರಗಳನ್ನು ಬಂದ್ ಮಾಡಿ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಅನಿವಾರ್ಯತೆ ಬಂದೊದಗಿದೆ. ನಮ್ಮ ಹಕ್ಕುಗಳನ್ನು ಪಡೆಯುವುದಕ್ಕಾಗಿ ಪ್ರತಿಯೊಬ್ಬ ನೌಕರರು ಸಂಘಟಿತರಾಗಬೇಕು. ಆಗಸ್ಟ್ ನಲ್ಲಿ ನಡೆಯುವ ವಿಧಾನಸಭಾ ಅಧಿವೇಶನದ ವೇಳೆ ಪ್ರತಿಭಟನೆ ಹಮ್ಮಿಕೊಳ್ಳಲು ಆಯೋಜಿಸುವುದು ಈ ಸಭೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ ಅರಣ್ಯ ಇಲಾಖೆಯಲ್ಲಿ ಶೇ.50 ರಷ್ಟು ಮಾತ್ರ ಖಾಯಂ ಅಧಿಕಾರಿ ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ, ಪಾರದರ್ಶಕತೆಯಿಂದ ಪ್ರಕೃತಿಯನ್ನು ಕಾಯುವ ಕೆಲಸವನ್ನು ಮಾಡುತ್ತಿದ್ದಾರೆ. ಉಳಿದ ಶೇ.50 ರಷ್ಟು ಅಧಿಕಾರಿಗಳು ಸಂಘರ್ಷ ಹೆಚ್ಚು ಇರುವ ಜಾಗಗಳಿಗೆ ವರ್ಗಾವಣೆ ಮಾಡಿಸಿಕೊಂಡು ಬರುತ್ತಾರೆ. ನಿಜವಾಗಿ ವನ್ಯ ಜೀವಿಗಳನ್ನು ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿರುವವರು ದಿನಗೂಲಿ ನೌಕರರು. ಈ ದಿನಗೂಲಿ ನೌಕರರಿಂದ ಅಂತಹ ಅಧಿಕಾರಿಗಳಿಗೆ ಗೌರವ ಹೆಚ್ಚಿತ್ತಿದೆ. ಆದರೆ ನಿಮಗೆ ಸರಿಯಾದ ವೇತನ ಮತ್ತು ಸೌಲಭ್ಯಗಳು ಸಿಗುತ್ತಿಲ್ಲ. ಹಾಗಾಗಿ ನಮ್ಮ ಹಕ್ಕುಗಳನ್ನು ನಾವು ಪಡೆದುಕೊಳ್ಳಲು ಹೋರಾಟದ ಅಗತ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹದೇಶ್ವರ ವನ್ಯಜೀವಿ ವಿಭಾಗ ಕಾವೇರಿ ವನ್ಯಜೀವಿ ವಿಭಾಗ ಹಾಗೂ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ದಿನಗೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸುವ ಅರಣ್ಯ ವೀಕ್ಷಕರು ಉಪಸ್ಥಿತರಿದ್ದರು.