ದೆಹಲಿ : ಮತ್ತೊಂದು ಮಿನಿ ಮಹಾಸಮರಕ್ಕೆ ಅಖಾಡ ಸಜ್ಜಾಗುತ್ತಿದೆ. ಮುಂದಿನ ವರ್ಷ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ಕುರಿತಂತೆ ಲೆಕ್ಕಾಚಾರ ಸಾಗಿದೆ. ಇದೇ ಸಂದರ್ಭದಲ್ಲಿ ನಡೆದ ಸಮೀಕ್ಷೆಯ ಫಲಿತಾಂಶ ಕುತೂಹಲ ಮೂಡಿಸಿದೆ.
‘ಸಿ ಓಟರ್’ ಮುಂದಿಟ್ಟ ಸುಳಿವು..
ಪಂಜಾಬ್, ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಖಂಡ್ ವಿಧಾನಸಭೆಗಳಿಗೆ ಬರುವ ವರ್ಷ ಚುನಾವಣೆ ನಡೆಯಲಿದೆ. ಈ ರಾಜ್ಯಗಳಲ್ಲಿ ಸಿ-ವೋಟರ್ ಸಮೀಕ್ಷೆ ನಡೆಸಿದೆ. ಈ ಚುನಾವಣೆಯಲ್ಲಿ ಪಂಜಾಬ್ ಹೊರತುಪಡಿಸಿ ಉಳಿದೆಡೆ ಬಿಜೆಪಿಗೆ ಮತದಾರರು ಮಾಲೆ ಹಾಕಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಈ ಪಂಚ ರಾಜ್ಯಗಳ ಅಖಾಡದಲ್ಲಿ ಮತದಾರರು ಕಾಂಗ್ರೆಸ್‌ಗೆ ಬಲವಾದ ಪಂಚ್ ನೀಡಲಿದ್ದಾರಂತೆ.
ಉತ್ತರಪ್ರದೇಶ:
ಸಿಎಂ ಯೋಗಿ ಆದಿತ್ಯನಾಥ್ ಮತ್ತೆ ಹೀರೋ ಆಗುವ ಸಾಧ್ಯತೆಗಳತ್ತ ಸಮೀಕ್ಷೆ ಬೊಟ್ಟು ಮಾಡಿದೆ. 2017ರ ಫಲಿತಾಂಶಕ್ಕಿಂತ ಸುಮಾರು 50 ಸೀಟುಗಳು ಕಡಿಮೆ ಸಿಕ್ಕಿದರೂ, 259-267 ಸ್ಥಾನಗಳನ್ನು ಗೆದ್ದು ಅಧಿಕಾರದಲ್ಲಿ ಬಿಜೆಪಿ ಮುಂದುವರಿಯಬಹುದು. ಪ್ರಸ್ತುತ 49 ಸ್ಥಾನಗಳನ್ನು ಹೊಂದಿರುವ ಎಸ್ಪಿ ಮುಂದಿನ ಚುನಾವಣೆಯಲ್ಲಿ 109-117 ಸ್ಥಾನಗಳನ್ನು ಗೆಲ್ಲಬಹುದು. 19 ಸ್ಥಾನಗಳನ್ನು ಹೊಂದಿರುವ ಬಿಎಸ್ಪಿ ಇನ್ನಷ್ಟು ಸೀಟುಗಳನ್ನು ಕಳೆದುಕೊಳ್ಳುವ ಆತಂಕ ವ್ಯಕ್ತವಾಗಿದೆ. ಕಾಂಗ್ರೆಸ್ ಒಂದಂಕಿಯನ್ನು ದಾಟುವುದೇ ಕಷ್ಟ.
ಗೋವಾ:
ಪ್ರವಾಸಿ ರಾಜ್ಯ ಗೋವಾದಲ್ಲಿ ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಬಹುದೆಂಬುದು ಸಮೀಕ್ಷೆಯಲ್ಲಿ ಸಿಕ್ಕಿದ ಸಂಗತಿ. 40 ಶಾಸಕ ಬಲದ ಗೋವಾದಲ್ಲಿ ಬಿಜೆಪಿಗೆ 22-26 ಸೀಟುಗಳು ಸಿಗಹುದಂತೆ. ಪ್ರಸ್ತುತ ಅತೀ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆಗಳಿದ್ದು, ಆಮ್ ಆದ್ಮಿ ಕನಸು ಚಿಗುರಲಿದೆ.
ಮಣಿಪುರ:
60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ 32-36 ಸ್ಥಾನಗಳೊಂದಿಗೆ ಬಿಜೆಪಿ ಪಾರುಪತ್ಯ ಸಾಧಿಸಲಿದೆ. ಕಾಂಗ್ರೆಸ್‌ಗೆ 18-22, ಎನ್‌ಪಿಎಲ್‌ಗೆ 2-6 ಸ್ಥಾನಗಳು ಸಿಗುವ ಸಾಧ್ಯತೆಗಳಿವೆ.
ಉತ್ತರಖಂಡ್:
70 ಸದಸ್ಯಬಲದ ಉತ್ತರಖಂಡ್ ವಿಧಾನಸಭೆಯಲ್ಲಿ ಕಮಲ ಕಮಾಲ್ ಸಾಧ್ಯತೆಯ ಸುಳಿವು ಸಿಕ್ಕಿದೆ. ಬಿಜೆಪಿಯು 44-48, ಕಾಂಗ್ರೆಸ್ 19-23, ಆಪ್ 4 ಸೀಟುಗಳನ್ನು ಗೆಲ್ಲುವ ಸಾಧ್ಯತೆಗಳಿವೆ ಎಂಬುದು ಸಮೀಕ್ಷೆಯಲ್ಲಿ ಗೊತ್ತಾದ ಮುನ್ಸೂಚನೆ.
ಪಂಜಾಬ್:
ಪಂಜಾಬ್‌ನಲ್ಲೂ ಕಾಂಗ್ರೆಸ್‌ಗೆ ಮುಖಭಂಗವಾಗುವ ಸಾಧ್ಯತೆಗಳೇ ಹೆಚ್ಚು. ಅಲ್ಲಿ ಆಮ್ ಆದ್ಮಿ ಚಿಗುರಲಿದೆ. ಈ ಸಮೀಕ್ಷೆ ಪ್ರಕಾರ 117 ಒಟ್ಟು ಸ್ಥಾನಗಳ ಪೈಕಿ ಆಪ್ 51-57 ಕ್ಷೇತ್ರಗಳನ್ನು ಗೆಲ್ಲಬಹುದು. ಕಾಂಗ್ರೆಸ್ 38-46 ಸೀಟುಗಳನ್ನು ಗೆಲ್ಲುವ ಸಾಧ್ಯತೆಗಳಿವೆ. ಅಕಾಲಿದಳವು 16-24 ಸ್ಥಾನಗಳನ್ನು ಜಯಿಸುವ ಸಾಧ್ಯತೆಗಳತ್ತ ಈ ಸಮೀಕ್ಷೆ ಬೊಟ್ಟು ಮಾಡಿದೆ.