ಮುಂಬೈ: ಪಾರಿವಾಳಗಳಿಗೆ ಆಹಾರ ಹಾಕಿದ ಕಾರಣಕ್ಕೆ ಮುಂಬೈನಲ್ಲಿ ಮೊತ್ತಮೊದಲ ಬಾರಿಗೆ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಇದು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ನಡೆದ ಮೊದಲ ದೂರು.
ಮಹಿಮ್‌ನ ಎಲ್‌ಜೆ ರಸ್ತೆಯ ಕಬುತರ್ಖಾನಾ ಬಳಿ, ಹಿಂದೂಜಾ ಆಸ್ಪತ್ರೆ ಹಾಗೂ ಡೊಮಿನೋಸ್ ಪಿಜ್ಜಾ ಔಟ್‌ಲೆಟ್ ಹತ್ತಿರ, ಕೆಲ ಅಪರಿಚಿತ ವ್ಯಕ್ತಿಗಳು ಪಾರಿವಾಳಗಳಿಗೆ ಧಾನ್ಯ ಹಾಕಿರುವುದನ್ನು ಕಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಜುಲೈ 31 ರಂದು ಬಾಂಬೆ ಹೈಕೋರ್ಟ್ ನೀಡಿದ ಆದೇಶದ ಬೆನ್ನಲ್ಲೇ ಈ ಕ್ರಮ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಪರಂಪರೆಯ ತಾಣಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದು ಆರೋಗ್ಯಕ್ಕೆ ಅಪಾಯಕಾರಿಯಾಗಿರುವುದರಿಂದ BMC ಅಧಿಕಾರಿಗಳಿಗೆ ಇಂತಹ ಕೃತ್ಯಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿತ್ತು.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಬೆಳಗ್ಗೆ 6:50ರ ವೇಳೆಗೆ ದ್ವಿಚಕ್ರ ವಾಹನದಲ್ಲಿ ಬಂದು ಪಾರಿವಾಳಗಳಿಗೆ ಧಾನ್ಯ ಹರಿಸಿದರೆನ್ನಲಾಗಿದೆ. ವಾಹನದ ನಂಬರ್ ಪ್ಲೇಟ್ ಸ್ಪಷ್ಟವಾಗಿಲ್ಲದ ಕಾರಣ ಆರೋಪಿಗಳನ್ನು ತಕ್ಷಣ ಗುರುತಿಸಲಾಗಿಲ್ಲ, ಆದರೆ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಶೋಧ ನಡೆಸಲಾಗಿದೆ. ಈ ಕುರಿತು BNS ಸೆಕ್ಷನ್ 223 (ಪೊಲೀಸರ ಆದೇಶ ಪಾಲಿಸದ ವರ್ತುಲ), 270 (ಸೋಂಕು ಹರಡುವಂತ ದುರುದ್ದೇಶ), ಮತ್ತು 271 (ಕ್ವಾರಂಟೈನ್ ನಿಯಮ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ನಡುವೆ, ಮುಂಬೈ ನಗರದಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ತಡೆಯಲು, ಬೀಟ್ ಮಾರ್ಷಲ್‌ಗಳು ಹಾಗೂ ಪೊಲೀಸ್ ಸಿಬ್ಬಂದಿ ಮೂರು ಪಾಳಿಗಳಲ್ಲಿ ಗಸ್ತು ಪಡೆಯನ್ನು ನಿಯೋಜಿಸಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.