ಬೆಂಗಳೂರು: ಬಿಜೆಪಿ ನಾಯಕ ವಿ.ಸೋಮಣ್ಣ ವಿರುದ್ದ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಪಕ್ಷ ದೂರು ನೀಡಿದೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿ.ಸೋಮಣ್ಣ ಅವರು, ಜೆಡಿಎಸ್ ಅಭ್ಯರ್ಥಿಗೆ ನಿವೃತ್ತಿಯಾಗುವಂತೆ ಒತ್ತಡ ಹೇರಿ, ಆಮಿಷ ಮತ್ತು ಬೆದರಿಕೆ ಒಡ್ಡಿದ್ದಾರೆಂದು ಕಾಂಗ್ರೆಸ್ ನಾಯಕ ಮಾಜಿ ಶಾಸಕ ರಮೇಶ್ ಬಾಬು ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ..?
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ವಿ.ಸೋಮಣ್ಣ ಅವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುತ್ತಾರೆ. ಇದೇ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಮಲ್ಲಿಕಾರ್ಜುನ ಸ್ವಾಮಿ ಎಂಬುವವರು ಸ್ಪರ್ಧೆ ಮಾಡಿರುತ್ತಾರೆ.
ಸಚಿವ ಶ್ರೀ ವಿ.ಸೋಮಣ್ಣ ಅವರು ಏಪ್ರಿಲ್ 24ರಂದು ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮಧ್ಯವರ್ತಿಯ ಮುಖಾತರ ದೂರವಾಣಿಯಲ್ಲಿ ಮಾತನಾಡಿ ಅವರ ನಾಮಪತ್ರವನ್ನು ವಾಪಸ್ಸು ಪಡೆಯುವಂತೆ ಒತ್ತಾಯ ಮಾಡಿ ಹಣದ ಆಮಿಷವನ್ನು ಒಡ್ಡಿರುತ್ತಾರೆ. ಏಪ್ರಿಲ್ 24 ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿದ್ದು. ಅದಕ್ಕೂ ಮುನ್ನ ವಿ.ಸೋಮಣ್ಣ ಅವರು ಒಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿದ್ದು, ಇನ್ನೊಂದು ಪಕ್ಷದ ಅಭ್ಯರ್ಥಿಗೆ ನಾಮಪತ್ರ ವಾಪಸ್ಸು ಪಡೆಯಲು ಒತ್ತಾಯ ಮಾಡಿ ಬೆದರಿಕೆ ಹಾಕುವ ಜೊತೆಗೆ ಹಣ ಮತ್ತು ಅಧಿಕಾರದ ಆಮಿಷವನ್ನು ಒಡ್ಡಿರುತ್ತಾರೆ ಎಂದು ರಮೇಶ್ ಬಾಬು ದೂರಿದ್ದಾರೆ.
ದೂರವಾಣಿಯ ಸಂಭಾಷಣೆಯು ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ. ಜೆಡಿಎಸ್ ಅಭ್ಯರ್ಥಿಯು ವಿ.ಸೋಮಣ್ಣ ದೂರವಾಣಿ ಮಾಡಿರುವುದನ್ನು ಒಪ್ಪಿಕೊಂಡು ತನಗೆ 50 ಲಕ್ಷ ರೂಪಾಯಿ ಆಮಿಷ ಒಡ್ಡಿದರು ಎಂದು ಹೇಳಿರುತ್ತಾರೆ. ಅಲ್ಲದೆ ಬಿಜೆಪಿ ಪಕ್ಷದ ಅಭ್ಯರ್ಥಿಯ ಒತ್ತಡ ಮತ್ತು ಆಮಿಷವನ್ನು ತಿರಸ್ಕರಿಸಿರುತ್ತಾರೆ. ವಿ.ಸೋಮಣ್ಣ ರವರ ಇಂತಹ ಆಮಿಷ ಮತ್ತು ಒತ್ತಡ ಏರುವ ಪ್ರಕ್ರಿಯೆ ಕಾನೂನುಬಾಹಿರವಾಗಿದ್ದು, ಚುನಾವಣಾ ನೀತಿನಿಯಮಗಳಿಗೆ ವಿರುದ್ಧವಾಗಿರುತ್ತದೆ. ಆದ ಕಾರಣ ಚುನಾವಣಾ ಆಯೋಗವು ಕೂಡಲೇ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ನವರ ಮೇಲೆ ಕಾನೂನು ಕ್ರಮ ಕೈಗೊಂಡು ಚುನಾವಣಾ ಕಣದಿಂದ ಅವರನ್ನು ಅಮಾನತು ಗೊಳಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪರವಾಗಿ ರಮೇಶ್ ಬಾಬು ಈ ದೂರಿನಲ್ಲಿ ಕೋರಿದ್ದಾರೆ.