ಹೊಸದಿಲ್ಲಿ: ಅರ್ಧದಷ್ಟು ಮಹಿಳೆಯರಿಗೆ ಮುಂಚಿನ ಋತುಬಂಧ (Early menopause) ಸಂದರ್ಭದಲ್ಲಿ ಖಿನ್ನತೆಯ ಅಪಾಯ ಹೆಚ್ಚಾಗಬಹುದು ಎಂಬುದನ್ನು ಅಧ್ಯಯನವೊಂದು ಬಿಚ್ಚಿಟ್ಟಿದೆ. ವಿಶೇಷವಾಗಿ ಲಕ್ಷಣಗಳ ತೀವ್ರತೆ ಹಾಗೂ ಭಾವನಾತ್ಮಕ ಬೆಂಬಲದ ಕೊರತೆಯೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಲಾಗುತ್ತಿದೆ.
40 ವರ್ಷಕ್ಕಿಂತ ಮೊದಲು ಋತುಬಂಧವಾಗುವ ಸ್ಥಿತಿಗೆ ವೈದ್ಯಕೀಯವಾಗಿ ‘ಪ್ರಾಥಮಿಕ ಅಂಡಾಶಯ ವೈಫಲ್ಯ’ (POI) ಎಂದು ಕರೆಯಲಾಗುತ್ತದೆ. ಈ ಸ್ಥಿತಿಯು ಕೇವಲ ಹಾರ್ಮೋನು ಬದಲಾವಣೆಯಲ್ಲ, ಸಂತಾನೋತ್ಪತ್ತಿಗೆ ಸಂಬಂಧಿಸಿದ ಮಾನಸಿಕ ಆಘಾತವನ್ನೂಂಟುಮಾಡುತ್ತದೆ. ಇದರ ಪರಿಣಾಮವಾಗಿ ಖಿನ್ನತೆ, ಆತಂಕ ಸೇರಿದಂತೆ ಮನಃಸ್ಥಿತಿ ಅಸ್ವಸ್ಥತೆಗಳ ಅಪಾಯ ಹೆಚ್ಚಾಗುತ್ತದೆ.
‘ಮೆನೋಪಾಸ್’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ತೀವ್ರ ಮೆನೋಪಾಸ್ ಲಕ್ಷಣಗಳು, ಭಾವನಾತ್ಮಕ ಬೆಂಬಲದ ಕೊರತೆ ಹಾಗೂ ಸಂತಾನೋತ್ಪತ್ತಿಯ ನಷ್ಟದಿಂದ ಉಂಟಾಗುವ ದುಃಖ ಇತ್ಯಾದಿ ಅಂಶಗಳು ಖಿನ್ನತೆಯ ಬೆಳವಣಿಗೆಗೆ ಕಾರಣವಾಗುತ್ತವೆ ಎಂದು ಸಂಶೋಧನೆಯಿಂದ ಕಂಡುಬಂದಿದೆ.
“POI ಇರುವ ಮಹಿಳೆಯರಲ್ಲಿ ಶೇಕಡಾ 29.9ರಷ್ಟು ಮಂದಿ ಖಿನ್ನತೆಯ ಲಕ್ಷಣಗಳನ್ನು ತೋರಿಸಿದ್ದಾರೆ,” ಎಂದು ಅಧ್ಯಯನದ ವರದಿ ವಿವರಿಸಿದೆ. 345 ಮಹಿಳೆಯರ ಮೇಲೆ ನಡೆಸಿದ ವಿಶ್ಲೇಷಣೆಯಲ್ಲಿ, ಹಾರ್ಮೋನ್ ಚಿಕಿತ್ಸೆಯ ಬಳಕೆ ಖಿನ್ನತೆಯ ಮಟ್ಟದ ಮೇಲೆ ನಿರ್ಧಿಷ್ಟ ಪರಿಣಾಮ ಬೀರಿಲ್ಲವೆಂಬುದು ಗಮನಾರ್ಹ ಸಂಗತಿ.
ದಿ ಮೆನೋಪಾಸ್ ಸೊಸೈಟಿಯ ಸಹಾಯಕ ವೈದ್ಯಕೀಯ ನಿರ್ದೇಶಕಿ ಡಾ. ಮೋನಿಕಾ ಕ್ರಿಸ್‌ಮಸ್ ಅವರು, “POI ಇರುವ ಮಹಿಳೆಯರಲ್ಲಿ ಖಿನ್ನತೆಯ ಲಕ್ಷಣಗಳು ಹೆಚ್ಚು ಕಂಡುಬರುತ್ತಿದ್ದು, ದೈನಂದಿನ ತಪಾಸಣೆಯಲ್ಲಿ ಮಾನಸಿಕ ಆರೋಗ್ಯದ ಪರಿಶೀಲನೆಯೂ ಅವಶ್ಯಕ” ಎಂದು ಹೇಳಿದ್ದಾರೆ.
ಅವರ ಪ್ರಕಾರ, “ಹಾರ್ಮೋನ್ ಚಿಕಿತ್ಸೆ ಯಾವಾಗಲೂ ಮನಸ್ಸಿಗೆ ಶಾಂತಿ ನೀಡುವ ಪರಿಹಾರವಲ್ಲ. ಈ ಹಿನ್ನೆಲೆಯಲ್ಲಿ ಪುರಾವೆ ಆಧಾರಿತ ಮನಃಸ್ಥಿತಿ ಮಧ್ಯಸ್ಥಿಕೆಗಳನ್ನು POI ಆರೈಕೆಯ ಭಾಗವನ್ನಾಗಿ ಮಾಡಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.