ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿಯ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ತನ್ನ ಆಶಯಗಳನ್ನು ಕಳೆದುಕೊಂಡಿದೆ. ಇದು ಅವರ ಚೊಚ್ಚಲ ಕಾರ್ಯಕ್ರಮವಾಗಿ ಉಳಿಯಿತೆ ಹೊರತು ಜನರ ಕಾರ್ಯಕ್ರಮ ಆಗಲಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಆರೋಪಿಸುದರು.
ದೊಡ್ಡಬಳ್ಲಾಪುರ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಗ್ರಾಮ ವಾಸ್ತವ್ಯಕ್ಕೂ ಮುನ್ನ ರೈತರಿಗೆ ಆಗಬೇಕಿದ್ದ ಕೆಲಸಗಳ ರೂಪುರೇಷೆ ಸಿದ್ದವಾಗಬೇಕಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತ ಕಾನೂನುಗಳ ಬಗ್ಗೆ ಸಾರ್ವಜನಿಕವಾಗಿ ತಿಳಿಸಿಕೊಡಬೇಕಿತ್ತು. ಏನೂ ಮಾಡದೆ, ಗ್ರಾಮ ವಾಸ್ತವ್ಯ ಮಾಡಿರುವುದು ಅರ್ಥ ಕಳೆದುಕೊಂಡಿದೆ. ಮುಂದಿನ ದಿನಗಳಲ್ಲಾದರೂ ಸ್ಥಳೀಯ ರೈತರಿಗೆ ಕಂದಾಯ ಇಲಾಖೆಯಿಂದ ಆಗಬಹುದಾದ ಕೆಲಸಗಳ ರೂಪು ರೇಷೆ, ಕೆಲಸಗಳು ಆಗಬಹುದಾದ ಸಮಯನ್ನು ನಿಗದಿ ಮಾಡಬೇಕು ಎಂದು ಅವರು ಕಂದಾಯ ಸಚಿವರಿಗೆ ಒತ್ತಾಯಿಸಿದರು.
ರೈತರು ತಾಲೂಕು ಕಚೇರಿಗೆ ಹೋದಾಗ ಸೌಜನ್ಯದಿಂದ ನಡೆದುಕೊಂಡು ಸಕಾಲಕ್ಕೆ ಅವರ ಕೆಲಸ ಮಾಡಿಕೊಟ್ಟರೆ ಸಾಕಾಗಿದೆ. ಇಂತಹ ಗ್ರಾಮ ವಾಸ್ತವ್ಯಗಳ ಆಶಯಗಳು ಈಡೇರುವಲ್ಲಿ ಇಂತಹ ಕ್ರಿಯಾತ್ಮಕ ಆಡಳಿತಕ್ಕೆ ಚಾಲನೆ ನೀಡಬೇಕಾಗಿದೆ ಎಂದು ಒತ್ತಾಯಿಸಿದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕಾಯ್ದೆಯಿಂದ ಶೇಕಡ 34 ರಷ್ಟು ರೈತರ ಭೂಮಿಯನ್ನು ಉದ್ಯಮಿಗಳ ಪಾಲು ಮಾಡಿರುವ ಬಿಜೆಪಿ ಸರ್ಕಾರ ಯಾರಿಗಾಗಿ ಗ್ರಾಮ ವಾಸ್ತವ್ಯ ಮಾಡುತ್ತಿರಯವುದು ಎಂಬುದು ರೈತರ ಪ್ರಶ್ನೆಯಾಗಿದೆ. ಈ ಪ್ರಶ್ನೆಗಳಿಗೆ ಉತ್ತರ ನೀಡಿ ಗ್ರಾಮ ವಾಸ್ತವ್ಯ ಮಾಡಿದರೆ ಮಾತ್ರ ಅದರ ಆಶಯವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸರ್ಕಾರಕ್ಕೆ ಆಗ್ರಹಿಸಿದರು.