ಬೆಂಗಳೂರು: ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಕೇಂದ್ರ ವಲಯ ಐಜಿಪಿ ಪೋಲಿಸ್ ಕವಾಯತ್ತನ್ನು ಆಯೋಜಿಸಲಾಗಿತ್ತು. ಕೇಂದ್ರ ವಲಯದ ಆರಕ್ಷಕ ಮಹಾನಿರೀಕ್ಷಕ ಎಂ.ಚಂದ್ರಶೇಖರ್ ಕವಾಯತ್ತಿನಲ್ಲಿ ಗೌರವ ವಂದನೆ ಸ್ವೀಕರಿಸಿದರು. ಡಿವೈಎಸ್ಪಿ ಟಿ.ರಂಗಪ್ಪ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ನೇತೃತ್ವದಲ್ಲಿ ನಡೆದ ಶಿಸ್ತು ಬದ್ದ ಕವಾಯತ್ತು ನೋಡುಗರ ಗಮನ ಸೆಳೆಯಿತು
ಈ ವೇಳೆ ಮಾತನಾಡಿದ ಕೇಂದ್ರ ವಲಯದ ಐಜಿಪಿ ಎಂ.ಚಂದ್ರಶೇಖರ್, ನಮ್ಮ ಇಲಾಖೆಯ ಸಿಬ್ಬಂದಿ ಕೆಲಸದ ಒತ್ತಡದ ನಡುವೆಯು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕಿದೆ. ಕೋವಿಡ್ ಬಗ್ಗೆ ಕಟ್ಟುನಿಟ್ಟಿನ ಮುಂಜಾಗ್ರತಾಕ್ರಮ ಕೈಗೊಳ್ಳುವುದು ಅನಿರ್ವಾರ್ಯತೆ ಎಲ್ಲರಿಗೂ ಇದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮ ಕಾರ್ಯ ನಿರ್ವಹಿಸಿದ ನಮ್ಮ ಸಿಬ್ಬಂದಿಗೆ ಸೂಕ್ತ ಗೌರವ ಸಲ್ಲಬೇಕು ಎಂದರು.
ಪೊಲೀಸ್ ಕ್ವಾರ್ಟ್ರಸ್ ಗಳ ಸಮರ್ಪಕ ನಿರ್ವಹಣೆ ನಮ್ಮ ಕರ್ತವ್ಯ, ಇಲಾಖೆಯಲ್ಲಿ ಯಾವುದೇ ಸಿಬ್ಬಂದಿಯನ್ನು ಕೀಳರಿಮೆಯಿಂದ ಕಾಣುವುದು ತಪ್ಪು, ಹಾಗೂ ಇಲಾಖೆಯಲ್ಲಿ ಸಮವಸ್ತ್ರಕ್ಕೆ ಅಪಮಾನಮಾಡದಂತೆ ಹೆಮ್ಮೆಯಿಂದ ಕಾರ್ಯನಿರ್ವಹಿಸಿ ಎಂದು ಸಿಬ್ಬಂದಿಗೆ ಕರೆ ನೀಡಿದರು.
ಅತಿ ಹೆಚ್ಚು ಅಂಕ ಪಡೆದ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಸೈಕಲ್ ವಿತರಣೆ, ಪೊಲೀಸ್ ಸಿಬ್ಬಂದಿಗಳಿಗೆ ರಸ್ತೆ ಸುರಕ್ಷತೆಗಾಗಿ ಹೆಲ್ಮೆಟ್ ವಿತರಣೆ, ಉತ್ತಮ ಕಾರ್ಯನಿರ್ವಹಿಸಿದ ಪೊಲೀಸರಿಗೆ ಪ್ರಶಂಸೆ ಪತ್ರ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ರಸ್ತೆ ಸಂಚಾರ ಸುರಕ್ಷತೆಯ ಬಗ್ಗೆ ಜಾಗೃತಿ ಜಾಥಾ ಕೈಗೊಳ್ಳಲಾಗಿತ್ತು.