ಒಂದೇ ತಿಂಗಳಲ್ಲಿ ನಾಲ್ವರ ಬಲಿ ಪಡೆದ ಹೆದ್ದಾರಿ.. ಓರ್ವ ಕೋಮಾಸ್ಥಿತಿಯಲ್ಲಿ ನರಕಯಾತನೆ.. ರಸ್ತೆಯ ಎರಡು ಭಾಗದಲ್ಲಿ ಸ್ಪೀಡ್ ಬ್ರೇಕರ್, ಸಿಗ್ನಲ್ ಗಳ ಅಳವಡಿಕೆಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ.
ದೊಡ್ಡಬಳ್ಳಾಪುರ: ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ ಹಾದುಹೋಗಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಕಂಟನಕುಂಟೆ ಗ್ರಾಮದ ಬಳಿಯ ರಸ್ತೆ ಗ್ರಾಮಸ್ಥರ ಪಾಲಿಗೆ ಮಸಣಕ್ಕೆ ದಾರಿ ಎಂಬಂತಿದೆ. ಕಳೆದ ಒಂದು ತಿಂಗಳಲ್ಲಿ ನಾಲ್ವರು ಗ್ರಾಮಸ್ಥರ ವಿವಿಧ ಅಪಘಾತ ಘಟಕಗಳಲ್ಲಿ ಸಾವನ್ನಪ್ಪಿದ್ದಾರೆ. ಇದಕ್ಕೆ ಕೆಆರ್‌ಡಿಸಿಎಲ್ ನೇರ ಹೊಣೆ ಎಂದು ಗ್ರಾಮಸ್ಥರು ಅಕ್ರೊಶ ವ್ಯಕ್ತಪಡಿಸಿದ್ದಾರೆ.
ಕಳೆದ ರಸ್ತೆ ನಿರ್ಮಾಣಗೊಂಡ ಬಳಿಕ ಕಂಟನಕುಂಟೆ ಗ್ರಾಮ ಆರಂಭ ಹಾಗೂ ಮುಕ್ತಾಯವಾಗುವವರೆಗೂ ರಾಜ್ಯ ಹೆದ್ದಾರಿಯಲ್ಲಿ ಸ್ಪೀಡ್‌ಬ್ರೇಕರ್ ನಿರ್ಮಿಸುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಲವಾರು ರಸ್ತೆ ಅಪಘಾತಗಳಾಗಿ ಸಾವು ನೋವುಗಳಾಗಿವೆ. ಕಂಟನಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಾಲ್ವರು ಬಲಿಯಾಗಿದ್ದಾರೆ. ಅಲ್ಲದೆ ಹಲವರು ಗಾಯಾಳುಗಾಳಗಿ ಮನೆಯಲ್ಲಿರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯ ಎರಡು ಭಾಗದಲ್ಲಿ ಶಾಲೆ, ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯದ ಪ್ರಮುಖ ರಸ್ತೆ, ಅಂಗಡಿಗಳು ಹೀಗೆ ಪ್ರಮುಖ ಕೇಂದ್ರಗಳು ಇವೆ. ಹೀಗಾಗಿ ರಸ್ತೆಯಲ್ಲಿ ಸಮರ್ಪಕ ಸ್ಪೀಡ್ ಬ್ರೇಕರ್, ಸಿಗ್ನಲ್, ಸರ್ವಿಸ್ ರಸ್ತೆ ಹೀಗೆ ಯಾವುದನ್ನೂ ಕೆಆರ್ ಡಿಸಿಎಲ್ ನಿರ್ಮಾಣ ಮಾಡಿಲ್ಲ. ಈ ರಸ್ತೆ ಅಪಘಾತಗಳು ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಇಲಾಖೆಯ ನಿರ್ಲಕ್ಷ್ಯದಿಂದಲೇ ನಡೆಯುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಕೆಆರ್‌ಡಿಸಿಎಲ್ ಅಧಿಕಾರಿ ಪುಟ್ಟಪ್ಪ ಅವರನ್ನು ಪ್ರತಿಭಟನಾನಿರತ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ನಿಮ್ಮ ನಿರ್ಲಕ್ಷ್ಯದಿಂದಲೇ ನಮ್ಮೂರಿನ ಹಲವರು ಪ್ರಾಣ ತೆರುತ್ತಿದ್ದಾರೆ. ಎಷ್ಟು ಬಾರಿ ಹೇಳಿದರೂ ಇಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಿಲ್ಲ. ಒಂದು ತಿಂಗಳ ಅಂತರದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ರಾಜಗೋಪಾಲ್, ಸ್ಪೀಡ್ ಬ್ರೇಕರ್ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಯಾರೂ ಕ್ರಮ ಕೈಗೊಂಡಿಲ್ಲ. ಕೆಆರ್ ಡಿಸಿಎಲ್ ನಿರ್ಲಕ್ಷ್ಯದಿಂದ ತಿಂಗಳ ಅಂತರದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ. ಕೂಡಲೇ ಸ್ಪೀಡ್ ಬ್ರೇಕರ್ ಅಳವಡಿಸವೇಕು. ಇಲ್ಲವಾದಲ್ಲಿ ಮತ್ತೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.