ಬೆಂಗಳೂರು: ಕೋವಿಡ್ ವೈರಾಣು ಸೋಂಕಿನ ಸಂದರ್ಭದಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಹಾಗೂ ಜಾಗೃತಿ ಕಾರ್ಯಕ್ರಮದತ್ತ ನ್ಯಾಯಾಂಗ ಇಲಾಖೆ ಅರ್ಥಪೂರ್ಣ ಹೆಜ್ಜೆ ಇಟ್ಟಿದೆ. ಈ ಸಂಬಂಧ ‘ನಮೋ ಸಮಾಜ್’ ಸಂಸ್ಥೆಯ ಸಹಭಾಗಿತ್ವದಲ್ಲಿ ಕೈಗೊಂಡಿರುವ ಕಾರ್ಯಕ್ರಮ ಗಮನಸೆಳೆದಿದೆ. ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷಾ ಸಾಮಾಗ್ರಿ, ರೋಗ ಪ್ರತಿರೋಧಕ ಔಷಧಿ ಹಾಗೂ ಆಮ್ಲಜನಕ ಪರೀಕ್ಷಾ ಉಪಕರಣಗಳನ್ನೊಳಗೊಂಡ ‘ಹೆಲ್ತ್ ಕಿಟ್’ ವಿತರಣೆಗೆ ಮುನ್ನುಡಿ ಬರೆಯಲಾಗಿದೆ.
ಬೆಂಗಳೂರು ನಗರ ಸಿಟಿ ಸಿವಿಲ್ ನ್ಯಾಯಾಲಯಗಳ ಕಟ್ಟಡ ಸಂಕೀರ್ಣ ಆವರಣದಲ್ಲಿ ಈ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಯೂ ಆದ ನ್ಯಾಯಾಧೀಶ ಆರ್.ಪಿ. ನಂದೀಶ್ ಹಾಗೂ ‘ನಮೋ ಸಮಾಜ್’ ಸಂಸ್ಥೆಯ ದಕ್ಷಿಣ ಭಾರತ್ ಪ್ರಮುಖ್ ಜಿ.ಆರ್.ಅನಿಲ್ ಕುಮಾರ್ ಅವರು ಈ ಕಿಟ್‌ಗಳನ್ನು ಕಾರ್ಯಕರ್ತರಿಗೆ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನ್ಯಾಯಧೀಶರಾದ ಅರ್.ಪಿ. ನಂದೀಶ್ ಅವರು ಮಾತನಾಡಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇದೇ ರೀತಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಈ ‘ಹೆಲ್ತ್ ಕಿಟ್’ಗಳನ್ನು ತಲುಪಿಸಿ, ಅವರ ಮೂಲಕ ತಲಾ ನೂರಾರು ಮಂದಿಯ ಸುರಕ್ಷಾ ಕಾರ್ಯ ಸಾಧ್ಯವಿದೆ. ಹಾಗಾಗಿ ಮೊದಲ ಹಂತದಲ್ಲಿ ಒಂದು ಸಾವಿರ ಕಿಟ್’ಗಳನ್ನು ವಿತರಿಸಲಾಗುತ್ತಿದೆ ಎಂದರು. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಸೋಂಕಿನಿಂದ ತಪ್ಪಿಸಿಕೊಳ್ಳಲು ಮೊದಲ ಆದ್ಯತೆ ನೀಡಬೇಕಿದೆ. ಮೊದಲು ಸ್ವಂತ ಸುರಕ್ಷತೆಗೆ ಆದ್ಯತೆ ನೀಡಿ, ಆ ಮೂಲಕ ಇಡೀ ಸಮಾಜವನ್ನೇ ಕಾಪಾಡಿಕೊಳ್ಳುವ ಪರಿಕಲ್ಪನೆಯಂತೆ ಸಾಮಾಜಿಕ ಹೋರಾಟಗಾರ ಜಿ.ಆರ್. ಅನಿಲ್ ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ರೂಪ ಕೊಟ್ಟಿದ್ದಾರೆ ಎಂದು ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಹೇಳಿದರು.
‘ನಮೋ ಸಮಾಜ್’ ಮುಖ್ಯಸ್ಥ ಜಿ.ಆರ್. ಅನಿಲ್ ಕುಮಾರ್ ಮಾತನಾಡಿ, ನಗರ ಹೊರವಲಯದ ಜನರ ಸುರಕ್ಷತೆಗೆ ಆದ್ಯತೆ ನೀಡಬೇಕಿದೆ. ಅವರಿಗೆ ವಿಟಮಿನ್ ಮಾತ್ರೆಗಳು, ಆಕ್ಸಿಮೀಟರ್‌ಗಳ ಅಗತ್ಯವಿದೆ. ಈ ದುಬಾರಿ ಉಪಕರಣಗಳನ್ನು ಖರೀದಿಸಲು ಬಡಪಾಯಿಗಳಿಂದ ಸಾಧ್ಯವಿಲ್ಲ. ಹಾಗಾಗಿ ಆರೋಗ್ಯ ಕಾರ್ಯಕರ್ತರಿಗೆ ಈ ಕಿಟ್’ಗಳನ್ಬು ನೀಡಿ ಅವರ ಮೂಲಕ ಸಾವಿರಾರು ಜನರಿಗೆ ವರದಾನವಾಗುವ ಕೆಲಸ ಮಾಡಲಾಗುತ್ತಿದೆ ಎಂದರು.
ಮೊದಲ ಹಂತದಲ್ಲಿ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವ್ಯಾಪ್ತಿಯಲ್ಲಿ ಈ ‘ಹೆಲ್ತ್ ಕಿಟ್’ಗಳನ್ನು ವಿತರಿಸಲಾಗುತ್ತಿದ್ದು, ಸದ್ಯವೇ ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಿಸಲಾಗುವುದು ಎಂದು ಜಿ.ಆರ್. ಅನಿಲ್ ಕುಮಾರ್ ಮಾಹಿತಿ ಹಂಚಿಕೊಂಡರು.
ಹೆಲ್ತ್ ಕಿಟ್’ನಲ್ಲಿರುವ ವಸ್ತುಗಳ ವಿವರ:
▪️ಅರ್ಧ ಲೀಟರ್ ಹ್ಯಾಂಡ್ ಸ್ಯಾನಿಟೈಸರ್,
▪️ಎನ್-95, 4 ಮುಖ ಗವಸು (ಫೇಸ್ ಮಾಸ್ಕ್),
▪️ಮೈಕ್ರೋಟೆಕ್ ಆಕ್ಸಿಮೀಟರ್,
▪️ವಿಟಮಿನ್-ಸಿ ಮಾತ್ರೆಗಳು,
▪️ಶ್ವಾಸಾಮೃತ,
▪️ಅರ್ಧ ಲೀಟರ್ ಅಮೃತಾರಿಷ್ಟ (ಭೈದ್ಯನಾಥ್)