ಬೆಂಗಳೂರು: ಮುಂಬರುವ ಚಿನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್ ನಾಯಕರು ದೇವರ ಮೊರೆ ಹೋಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ಕೂಡುಮಲೆ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕೂಡುಮಲೆ ಗಣಪತಿ ದೇವಾಲಯಕ್ಕೆ ಭೇಟಿ ನೀಡಿದ ಉದ್ದೇಶದ ಬಗ್ಗೆ ಮಾಹಿತಿ ಹಂಚಿಕೊಂಡವ ಡಿ.ಕೆ. ಶಿವಕುಮಾರ್ ಅವರು, 1999ರಲ್ಲಿ ಎಸ್.ಎಂ ಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೂಡುಮಲೆ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿ ರಾಜ್ಯದ ಸಂಕಷ್ಟಗಳಿಗೆ ಪರಿಹಾರ ನೀಡುವಂತೆ ಪ್ರಾರ್ಥನೆ ಮಾಡಿ ಪಾಂಚಜನ್ಯ ಯಾತ್ರೆ ಆರಂಭಿಸಿದ್ದರು. ನಂತರ ರಾಜ್ಯಕ್ಕೆ ಒಳ್ಳೆಯದಾಗಿತ್ತು ಎಂದರು.
ರಾಜ್ಯದ ಮೂಡಣ ಬಾಗಿಲು ಎಂದೇ ಕರೆಯಲ್ಪಡುವ ಮುಳಬಾಗಿಲು ಬಹಳ ವಿಶೇಷವಾದ ಸ್ಥಳ. ನಮ್ಮ ಸಂಸ್ಕೃತಿಯಲ್ಲಿ ದೇವ ಮೂಲೆಗೆ ವಿಶೇಷ ಸ್ಥಾನಮಾನವಿದೆ. ನಾವು ಬೇರೆ ಧರ್ಮ ಸಂಸೃತಿಯನ್ನು ಗೌರವಿಸಿ, ಸಂವಿಧಾನದ ಆಶಯದಂತೆ ನಡೆಯುತ್ತಿದ್ದೇವೆ. ಹೀಗಾಗಿ ನಾನು ಕೂಡ ರಾಜ್ಯದ ಪ್ರಜೆಗಳ ಧ್ವನಿಯಾಗಿರುವ ಪ್ರಜಾಧ್ವನಿ ಯಾತ್ರೆಯನ್ನು ಈ ಪವಿತ್ರವಾದ ಸ್ಥಳದಲ್ಲಿ ಆರಂಭಿಸುತ್ತಿದ್ದೇನೆ ಎಂದವರು ತಿಳಿಸಿದರು
ಮತ್ತೊಂದೆಡೆ ಸಿದ್ದರಾಮಯ್ಯ ಅವರು ಬಸವಣ್ಣನವರ ಭೂಮಿ ಬಸವಕಲ್ಯಾಣದಲ್ಲಿ ಯಾತ್ರೆ ಆರಂಭಿಸುತ್ತಿದ್ದಾರೆ ಎಂದು ತಿಳಿಸಿದ ಡಿಕೆಶಿ, ಪಕ್ಷದಲ್ಲಿ ಗುಂಪುಗಾರಿಕೆ ಇದೆ ಎಂಬ ಪ್ರಶ್ನೆಗೆ, ‘ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲಾ ನಾಯಕರು ಈ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ನಮ್ಮಲ್ಲಿ ಇರುವುದು ಒಂದೇ ಗುಂಪು ಅದು ಕಾಂಗ್ರೆಸ್ ಗುಂಪು ‘ ಎಂದು ತಿಳಿಸಿದರು.