ಚಿತ್ರದುರ್ಗ: ಸರ್ಕಾರದ ಬೊಕ್ಕಸ ತುಂಬಿದರೆ ಸಾಕೇ..? ಬಡವರು, ಜನಸಾಮಾನ್ಯರು ಜೀವನ ನಡೆಸುವುದು ಹೇಗೆ? ಅವರ ಪರಿಸ್ಥಿತಿ ಏನಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇಂಧನ ತೈಲ ಬೆಲೆ ಏರಿಕೆ ಖಂಡಿಸಿ ಪ್ರದೇಶ ಕಾಂಗ್ರೆಸ್ ಐದು ದಿನಗಳ ಕಾಲ ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘100 ನಾಟ್ ಔಟ್’ ಆಂದೋಲನ ಭಾಗವಾಗಿ ಶಿವಕುಮಾರ್ ಅವರು ಚಿತ್ರದುರ್ಗದ ಹಿರಿಯೂರು ತಾಲೂಕು ಕೇಂದ್ರದಲ್ಲಿ ಶನಿವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ‘ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಮಾಡುತ್ತಿರುವ ಐದು ದಿನಗಳ ಪ್ರತಿಭಟನಾ ಆಂದೋಲನ ಭಾಗವಾಗಿ ನಿನ್ನೆ ರಾಜ್ಯ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಮಾಡಿದ್ದು, ಇಂದು ತಾಲೂಕು ಕೇಂದ್ರಗಳಲ್ಲಿ, ನಾಳೆ ಹೋಬಳಿ ಹಾಗೂ ಜಿಲ್ಲಾ ಪಂಚಾಯಿತಿ ಕೇಂದ್ರಗಳಲ್ಲಿ, ನಾಡಿದ್ದು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ, ಉಳಿದ ಕೇಂದ್ರಗಳಲ್ಲಿ 15ರಂದು ಪ್ರತಿಭಟನೆ ಮಾಡುತ್ತೇವೆ ಎಂದರು.
ಐದು ದಿನ ಐದು ಸಾವಿರ ಪೆಟ್ರೋಲ್ ಬಂಕ್ ಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಇದು ಒಬ್ಬರ ಕಾರ್ಯಕ್ರಮ ಅಲ್ಲ. ಕಾಂಗ್ರೆಸ್ ಕಾರ್ಯಕ್ರಮ ಅಲ್ಲ. ಇದು ಜನತಾದಳ, ಬಿಜೆಪಿ ಹಾಗೂ ಎಲ್ಲ ಜನರ ಕಾರ್ಯಕ್ರಮ ಎಂದವರು ಹೇಳಿದರು.
ಬಿಜೆಪಿಯವರು ಈ ಹಿಂದೆ ಇದೇ ಕೆಲಸ ಮಾಡಿದ್ದರಲ್ಲ, ಅವರು ಪ್ರತಿಭಟನೆ ಮಾಡಿದ್ದನ್ನು ನಾವು ಈಗ ಮುಂದುವರಿಸುತ್ತಿದ್ದೇವೆ ಎಂದ ಅವರು, ಪೆಟ್ರೋಲ್ ಡೀಸೆಲ್ ಬೆಲೆ ಇಷ್ಟು ಬಾರಿ ಹೆಚ್ಚಳ ಮಾಡಿದ್ದೀರಲ್ಲಾ.., ರೈತರ ಬೆಂಬಲ ಬೆಲೆ ಎಷ್ಟು ಬಾರಿ ಹೆಚ್ಚಿಸಿದ್ದೀರಿ? ರೈತನ ಎಲ್ಲ ಬೆಳೆಯ ಬೆಲೆಯನ್ನು ಎಷ್ಟು ಬಾರಿ ಹೆಚ್ಚಿಸಿದ್ದೀರಿ? ದಿನಗೂಲಿ, ಖಾಸಗಿ ಕಾರ್ಮಿಕರು, ನೌಕರರು, ನರೇಗಾ ಕಾರ್ಮಿಕರ ವೇತನ ಎಷ್ಟು ಬಾರೀ ಹೆಚ್ಚಿಸಿದ್ದೀರಿ? ಎಂದು ಯಡಿಯೂರಪ್ಪ ಹಾಗೂ ಮೋದಿ ಅವರನ್ನು ಕೇಳಲು ಬಯಸುತ್ತೇನೆ ಎಂದರು.