ಮಂಗಳೂರು: ‘ನುಡಿಸುಗ್ಗಿ’ಯಂತಹಾ ಅಕ್ಷರ ಜಾತ್ರೆಗಳ ಯಶಸ್ಸಿಗೆ ಹೆಸರಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಮತ್ತೊಂದು ‘ಪತ್ರಿಕಾಹಬ್ಬ’ಕ್ಕೆ ಸಾಕ್ಷಿಯಾಗಲಿದೆ. ಪತ್ರಕರ್ತರ ಮಹಾಸಮ್ಮೇಳನದ ಅಂಗಳದಲ್ಲಿ ತಯಾರಿಯ ಸಡಗರ ಜೋರಾಗಿದ್ದು, ಪತ್ರಕರ್ತರ ಪಾಳಯದಲ್ಲಿ ಚಟುವಟಕೆಗಳು ಗರಿಗೆದರಿವೆ.
ಪ್ರಸ್ತುತ ‘ಮಾದ್ಯಮ ಕ್ರಾಂತಿ’ಯ ಪರ್ವಕ್ಕೆ ನಾಡು ಸಾಕ್ಷಿಯಾಗಿದ್ದರೂ ಪತ್ರಕರ್ತರ ಬದುಕು ಈಗಿನ್ನೂ ತೂಗುಯ್ಯಾಲೆಯಲ್ಲಿದೆ. ಮಾಧ್ಯಮಗಳು ಉದ್ಯಮ ಸ್ವರೂಪ ಪಡೆದಿರುವುದರಿಂದ ಒಡೆತನವೂ ವರ್ಗಾವಣೆಯಾಗುತ್ತಲೇ ಇವೆ. ಹಾಗಾಗಿ ಪತ್ರಕರ್ತರಿಗೆ ಸೇವಾ ಅಭದ್ರತೆ ಕಾಡುತ್ತಿದೆ. ಬಹಳಷ್ಟು ಪತ್ರಕರ್ತರು ಪೂರ್ಣಕಾಲಿಕ ಪತ್ರಿಕೋದ್ಯಮದಿಂದ ಹೊರಬಿದ್ದಿದ್ದು ಪರ್ಯಾಯ ಕಾಯಕಕ್ಕಾಗಿ ಪರದಾಡುವಂತಾಗಿದೆ. ಆದರೂ ಸಂಘದ ಸದಸ್ಯರಾಗಿ ಕಾರ್ಯನಿರತ ಪತ್ರಕರ್ತರೆಂದೇ ಬಿಂಬಿತರಾಗಿದ್ದಾರೆ.
ಈ ಸಂದರ್ಭದಲ್ಲಿ, ಪತ್ರಕರ್ತರ ಆಶಯ, ನಿರೀಕ್ಷೆಗಳಂತೆ ನಡೆಯುವ ಪಣತೊಟ್ಟಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಈ ಕುರಿತಂತೆಯೂ ಚಿಂತನ-ಮಂಥನ ನಡೆಸುತ್ತದೆಂಬ ನಿರೀಕ್ಷೆ ಹಲವರದ್ದು. ಈ ನಿಟ್ಟಿನಲ್ಲಿ ಸೂಕ್ತ ನಿರ್ಣಯವನ್ನು ಈ ಬಾರಿಯ ಪತ್ರಕರ್ತರ ಸಮ್ಮೇಳನದಲ್ಲಿ ಕೈಗೊಳ್ಳಬಹುದು, ಈ ಸಂಬಂಧದ ಸೂಕ್ತ ನಡೆಗೆ ಮುನ್ನುಡಿ ಇಡಬಹುದೆಂಬ ನಿರೀಕ್ಷೆ ಹೆಚ್ಚಿದೆ.
ರಾಜರ್ಷಿ ಹೆಗ್ಗಡೆ ಆಶೀರ್ವಾದ..
ಈ ನಡುವೆ, ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜನವರಿ 3 ರಂದು ನಡೆಯಲಿರುವ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 3ನೇ ಜಿಲ್ಲಾ ಸಮ್ಮೇಳನದ ಲಾಂಛನವನ್ನು ಧರ್ಮಸ್ಥಳದ ಧರ್ಮಾಧಿಕಾರಿ , ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸೋಮವಾರ ಅನಾವರಣಗೊಳಿಸಿದರು. ಈ ಸಂದರ್ಭ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದ ಡಾ.ಹೆಗ್ಗಡೆ ಅವರು, ಸಮ್ಮೇಳನ ಅರ್ಥಪೂರ್ಣವಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ, ಖಜಾಂಚಿ ಬಿ.ಎನ್.ಪುಷ್ಪರಾಜ್ , ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ಬಿ.ಹರೀಶ್ ರೈ , ರಾಜ್ಯ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಶಿರ್ಲಾಲು, ಪ್ರಧಾನ ಕಾರ್ಯದರ್ಶಿ ಚೈತ್ರೇಶ್ ಇಳಂತಿಲ , ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಉಪಸ್ಥಿತರಿದ್ದರು.





















































