ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಕೇವಲ ಒಂದು ಹೆಜ್ಜೆ ಮಾತ್ರ ಇದೆ. ನಾಯಕರುಸಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಪರಿಷತ್ ಸದಸ್ಯರೂ ಆದ ಬಿ.ಕೆ.ಹರಿಪ್ರಸಾದ್, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಕೇವಲ ಒಂದು ಹೆಜ್ಜೆ ಮಾತ್ರ ಇದೆ. ಅಧಿಕಾರ ಹಂಚಿಕೆ ಕೇವಲ ಏಳು ಜನರಿಗೆ ಮಾತ್ರ ಗೊತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಅವರಿಗೆ ಮಾತ್ರ ಗೊತ್ತಿದೆ. ಉಳಿದವರು ಯಾರೇ ಮಾತಾಡಿದರೂ ಕೇವಲ ಒಬ್ಬರನ್ನ ಓಲೈಸಿಕೊಳ್ಳಲು ಮಾತ್ರ. ಯಾರೇ ಅಧಿಕಾರ ಹಂಚಿಕೆ ಬಗ್ಗೆ ಮಾತಾಡಿದರೂ ಅದು ಸುಳ್ಳು ಎಂದರು.
ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ ಎಂದು ಒಕ್ಕಲಿಗ ಸಮುದಾಯ ಕಾಂಗ್ರೆಸ್ ಕಡೆ ಬಂತು. ಜೆಡಿಎಸ್‌ನ ಮತಗಳೆಲ್ಲ ಕಾಂಗ್ರೆಸ್ ಕಡೆ ಬಂದಿದೆ. ಇದರಿಂದ ಜೆಡಿಎಸ್ ಮತಗಳು ಕುಸಿದಿದೆ ಎಂದು ವಿಶ್ಲೇಷಿಸಿದ ಹರಿಪ್ರಸಾದ್, ಒಕ್ಕಲಿಗ ಸಮುದಾಯದ ನಾಯಕತ್ವ ನಮಗೆ ಇರಲಿಲ್ಲ, ಡಿ.ಕೆ.ಶಿವಕುಮಾರ್ ಅವರನ್ನ ಕೆಪಿಸಿಸಿ ಅಧ್ಯಕ್ಷ ಮಾಡಿದಾಗ, ಅವರು ಸಿಎಂ ಆಗ್ತಾರೆ ಎಂದಾಗ ಒಕ್ಕಲಿಗ ಓಟ್ ಕಾಂಗ್ರೆಸ್‌ಗೆ ಬಂದಿದೆ. ಆದರೆ ಡಿ.ಕೆ.ಶಿವಕುಮಾರ್ ಅವರನ್ನ ಈಗ ಡಿಸಿಎಂ ಮಾಡಿದ್ದಾರೆ ಎಂದರು.
ನಮ್ಮದು ಅಹಿಂದ ಸಿದ್ದಾಂತವಲ್ಲ, ಕಾಂಗ್ರೆಸ್ ಸಿದ್ದಾಂತ
ನನ್ನ ಸಾಮಾಜಿಕ ನ್ಯಾಯದ ಸಿದ್ದಾಂತಕ್ಕೂ, ಅಹಿಂದ ರಾಜಕೀಯಕ್ಕೂ ವ್ಯತ್ಯಾಸ ಇದೆ. ನಾನು ಸರ್ವಧರ್ಮ ಸಮಬಾಳ್ವೆಯಲ್ಲಿ ನಂಬಿಕೆ ಇಟ್ಟವನು. ಕಾಂಗ್ರೆಸ್ ಸಿದ್ದಾಂತದಲ್ಲಿ ನಂಬಿಕೆ ಇಟ್ಟಿದ್ದೇನೆ. ಎಲ್ಲಿಯವರೆಗೂ ಇರು ಅಂತಾರೊ, ಅಲ್ಲಿಯವರೆಗೂ ನಾನು ಇರ್ತಿನಿ ಎಂದವವರು ಹೇಳಿದರು
ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ಯಾವ ಸಂಕೋಚವೂ ಇಲ್ಲ, ತಾಪತ್ರಯವೂ ಇಲ್ಲ.
ಪಕ್ಷದಲ್ಲಿ ಎಲ್ಲರೂ ಅವರವರ ರೀತಿಯಲ್ಲಿ ಪಕ್ಷಕ್ಕಾಗಿ ದುಡಿದಿರುತ್ತಾರೆ. ನಾನು ಪಕ್ಷ ಕಟ್ಟಿದವನು. ರಾಜೀನಾಮೆ ವಿಷಯ ಎಲ್ಲಿಂದ ಹುಟ್ಟಿದೆ ಗೊತ್ತಿಲ್ಲ. ರಾಜೀನಾಮೆ ಕೊಡಲು ನಾನು ಬಾಡಿಗೆ ಮನೆಯಿಂದ ಬಂದವನಲ್ಲ ಸ್ವಂತ ಮನೆಯಲ್ಲಿದ್ದೇನೆ ಎಂದವರು ಪುನರುಚ್ಛರಿಸಿದರು.