ಮಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತದ ವಿರುದ್ದ ಹಿಂದೂ ಸಂಘಟನೆ ಮುಖಂಡರು ಸಿಡಿದೆದ್ದಾರೆ. ದೇವಾಲಯಗಳ ಸಂರಕ್ಷಣೆ ವಿಚಾರದಲ್ಲಿನ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ದೇವಾಲಯ ಸಮೀಪ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಹಾಗೂ ಕಾರಿಂಜೇಶ್ವರ ದೇವಾಲಯ ಸಂರಕ್ಷಣೆಗೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿಂದು ಬೃಹತ್ ಜನಜಾಗೃತಿ ಸಮಾವೇಶ ನೆರವೇರಿತು. ‘ರತ್ನಗಿರಿಯ ರಣಕಹಳೆ’ ಹೆಸರಿನಲ್ಲಿ ಕಾರಿಂಜೇಶ್ವರನ ಸನ್ನಿಧಿಗೆ ಜಾಗರಣದ ವೀರ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಜಾಗೃತಿ ಸಮಾವೇಶದಲ್ಲಿ ಸಾವಿರಾರು ಮಂದಿ ಹಿಂದೂ ಕಾರ್ಯಕರ್ತರು ಭಾಗಿಯಾಗಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದರು.
ಕಾರಿಂಜೇಶ್ವರ ಕ್ಷೇತ್ರದ ಪಕ್ಕದಲ್ಲಿ ಅಕ್ರಮ ಗಣಿಗಾರಿಕೆ ನಡೆಯಲು ಭ್ರಷ್ಟ ವ್ಯವಸ್ಥೆಯೇ ಕಾರಣ ಎಂದು ಗುಡುಗಿದ ಕಾರಂತ್, ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳ ಭ್ರಷ್ಟಾಚಾರವನ್ನು ಪ್ರಶ್ನಿಸದಿದ್ದರೆ ಜನಪ್ರತಿನಿಧಿಗಳೂ ಬೆಂಗಾವಲಾಗಿದ್ದಾರೆ ಎಂದರ್ಥ ಅಲ್ಲವೇ ಎಂದು ದೂರಿದರು.
ಕಾರಿಂಜೇಶ್ವರ ಬೆಟ್ಟ ಸಮೀಪದ ಅಕ್ರಮ ಗಣಿಗಾರಿಕೆಯನ್ನು ಒಂದು ತಿಂಗಳೊಳಗಾಗಿ ನಿಲ್ಲಿಸಬೇಕು ಎಂದು ಗಡುವು ನೀಡಿದ ಅವರು, ಒಂದು ವೇಳೆ ಇದು ಈಡೇರದೇ ಇದ್ದರೆ ಡಿಸೆಂಬರ್ 21ರಂದು ಜಿಲ್ಲಾಧಿಕಾರಿ ವರ್ಗಾವಣೆಯಾಗಬೇಕು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಡಿಸೆಂಬರ್ 21ರಂದು ಉಸ್ತುವಾರಿ ಮಂತ್ರಿ ಹಾಗೂ ಶಾಸಕರು ಜಂಟಿ ಸುದ್ದಿಗೋಷ್ಟಿ ನಡೆಸಿ ನಿರ್ಧಾರ ಪ್ರಕಟಿಸಬೇಕು. ಒಂದು ವೇಳೆ ಈ ಕ್ರಮ ಜರುಗದಿದ್ದರೆ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಘೋಷಿಸಿದರು.
ಈ ಪ್ರತಿಭಟನೆಯ ಸ್ವರೂಪ ಹೇಗಿರುತ್ತದೆ ಎಂದು ವೇದಿಕೆಯಲ್ಲೇ ಸಾರಿದ ಜಗದೀಶ್ ಕಾರಂತ್, ಉಡುಪಿಯ ಬೈಂದೂರಿನಿಂದ, ಸುಳ್ಯದ ಸಂಪಾಜೆಯಿಂದ, ಚಾರ್ಮಾಡಿಯಿಂದ, ಆಗುಂಬೆಯಿಂದ ಹಿಂದೂ ಸಂಘಟನೆಗಳ ಸಾವಿರಾರು ಮಂದಿ ಮಂಗಳೂರಿನತ್ತ ಜಾಥಾ ಕೈಗೊಂಡು ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಭಾಷಣದುದ್ದಕ್ಕೂ ಅವರು ರಾಜ್ಯ ಬಿಜೆಪಿ ಸರ್ಕಾರವು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಜಗದೀಶ್ ಕಾರಂತ್ ಆಕ್ರೋಶ ಹೊರಹಾಕಿದರು. ಹಿಂದೆ ಟಿಪ್ಪೂ ಆಡಳಿತದಲ್ಲಿ ದೇವಾಲಯಗಳು ಧ್ವಂಸವಾಗಿದ್ದನ್ನು ಹೇಳುತ್ತಿದ್ದೇವೆ. ಬಾಬರ್, ಖಿಲ್ಜೀ ಮೊದಲಾದವರು ದೇಗುಲಗಳನ್ನು ಧ್ವಂಸ ಮಾಡಿರುವುದನ್ನು ಖಂಡಿಸುತ್ತಿದ್ದೇವೆ. ಆದರೆ ಈಗ ನಮ್ಮಿಂದಲೇ ಆಯ್ಕೆಯಾಗಿರುವ ಬಿಜೆಪಿ ಸರ್ಕಾರವೂ ಅದೇ ಮಾರ್ಗದಲ್ಲಿ ಸಾಗಿದರೆ ಹೇಗೆ ಎಂದು ತಮ್ಮದೇ ದಾಟಿಯಲ್ಲಿ ಬೊಮ್ಮಾಯಿ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡರು. ಸುಪ್ರೀಂ ಕೋರ್ಟ್ ಆದೇಶದ ನೆಪದಲ್ಲಿ ದೇವಾಲಯ ಧ್ವಂಸ ಮಾಡಿರುವ ಕ್ರಮವನ್ನು ಖಂಡಿಸಿದರು.