ಮಂಗಳೂರು: ಅನ್‌ಲಾಕ್ ಪ್ರಕ್ರಿಯೆ ಮುಂದುವರಿದಿದ್ದು ದೇಗುಲಗಳಲ್ಲಿ ಭಕ್ತರಿಗೆ ದರ್ಶನ ಭಾಗ್ಯ ಸಿಗುತ್ತಿದೆ. ಕೋವಿಡ್ ಮಾರ್ಗಸೂಚಿ ನಿಯಮಗಳಲ್ಲಿ ಸಡಿಲಿಕೆಯಾಗುತ್ತಿದ್ದಂತೆಯೇ ಜನರು ಕೂಡಾ ಮುಕ್ತವಾಗಿ ಓಡಾಡುವಂತಾಗಿದೆ. ಈ ಸಡಿಲಿಕೆಯ ನಂತರ ದೇಗುಲಗಳಿಗೆ ಭಕ್ತ ಸಾಗರವೇ ಹರಿದು ಬರುತ್ತಿದೆ.
ದಕ್ಷಿಣ ಭಾರತದ ಪುಣ್ಯ ಕ್ಷೇತ್ರ ಧರ್ಮಸ್ಥಳಳದಲ್ಲಿ ವಾರಾಂತ್ಯದ ದಿನಗಳಲ್ಲಿ ಭಾರೀ ಜನಸಂದಣಿಯ ಸನ್ನಿವೇಶ ಕಂಡುಬಂತು. ಸೋಮವಾರವಾದ ಇಂದು ಬೆಳ್ಳಂಬೆಳಿಗ್ಗೆಯೇ ಸಾವಿರಾರು ಭಕ್ತರು ದೇವಾಲಯ ಮುಂದೆ ದರ್ಶನಕ್ಕಾಗಿ ಜಮಾಯಿಸಿದ್ದರು.
ದೇಗುಲ ಮುಂದೆ ಹಾಗೂ ಸುತ್ತ ಮುತ್ತ ಭಕ್ತರ ಸಾವಿರಾರು ವಾಹನಗಳು ನಿಂತಿದ್ದು ಸಾರ್ವಜನಿಕರು ಪರದಾಡುವಂತಾಗಿದೆ. ಪರಿಸ್ಥಿತಿ ನಿಯಂತ್ರಿಸಲು ದೇವಾಲಯದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಡುತ್ತಿದ್ದರು.