ಧಾರವಾಡ: ಮದುವೆ ಮನೆಗೆ ತೆರಳುತ್ತಿದ್ದವರು ಸೇರಿದ್ದು ಮಸಣಕ್ಕೆ. ಮಧ್ಯರಾತ್ರಿ ಜವರಾಯನ ಅಟ್ಟಹಾಸಕ್ಕೆ 7 ಮಂದಿ ಬಲಿಯಾಗಿದ್ದಾರೆ.
ಧಾರವಾಡ ಸಮೀಪ ಮದುವೆಗೆ ತೆರಳುತ್ತಿದ್ದವರಿದ್ದ ಕ್ರೂಸರ್ ವಾಹನ ಅಪಘಾತಕ್ಕೀಡಾಗಿ 7 ಮಂದಿ ಸಾವನ್ನಪ್ಪಿದ್ದಾರೆ. ಬಾಡ ಗ್ರಾಮದಲ್ಲಿ ಕ್ರೂಸರ್ ವಾಹನ ಮರಕ್ಕೆ ಡಿಕ್ಲಿಯಾಗಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಿಗದಿ ಗ್ರಾಮದಲ್ಲಿ ಮದುವೆ ಸಮಾರಂಭ ಏರ್ಪಾಡಾಗಿತ್ತು. ಮಳೆ ಹಿನ್ನೆಲೆಯಲ್ಲಿ ಮನ್ಸೂರ ರೇವಣಸಿದ್ದೇಶ್ವರ ಮಠಕ್ಕೆ ಮದುವೆ ಸಮಾರಂಭವನ್ಬು ಸ್ಥಳಾಂತರ ಮಾಡಲಾಗಿತ್ತು. ಮದುವೆ ಮುನ್ನಾದಿನದ ಇಳೆ ಕಾರ್ಯಕ್ಕೆ ತೆರಳಿದ್ದವರು ಊಟ ಮುಗಿಸಿ ರಾತ್ರಿ ನಿಗದಿಗೆ ವಾಪಾಸಾಗುತ್ತಿದ್ದರು. ಮಾರ್ಗ ಮಧ್ಯೆ, ತಡ ರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಇವರಿದ್ದ ವಾಹನ ಅಪಘಾತಕ್ಕೀಡಾಗಿದೆ.
ಮಳೆಯಿಂದಾಗಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಕ್ರೂಸರ್ ವಾಹನ ನುಜ್ಜುಗುಜ್ಜಾಗಿದೆ. ಎಸ್‌ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.


























































