ವಿಜಯಪುರ: ಅಪ್ರಾಪ್ತೆ ಮೇಲಿನ ಅತ್ಯಾಚಾರ ಆರೋಪದಲ್ಲಿ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ ಬರೋಬ್ಬರಿ 20 ವರ್ಷಗಳ ಜೈಲು ಶಿಕ್ಷೆಯ ತೀರ್ಪು ನೀಡಿದೆ.
ಅಪ್ರಾಪ್ತೆಯನ್ನು ಪುಸಲಾಯಿಸಿ ಮಹಾರಾಷ್ಟ್ರಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಅಪರಾಧಿಗೆ ವಿಜಯಪುರದ ಜಿಲ್ಲಾ ಮತ್ತು ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.
ಏನಿದು ಪ್ರಕರಣ..?
ಮಹಾರಾಷ್ಟ್ರದ ಪರಳಿ-ವೈದ್ಯನಾಥ ಗ್ರಾಮದ ನಿವಾಸಿ ರಾಹುಲ್ ಅಮರ ಗೋಸ್ಟಿ (22) ಎಂಬಾತ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆಂದು ದೂರು ದಾಖಲಾಗಿತ್ತು. ಸಂತ್ರಸ್ತೆಯ ಕುಟುಂಬ ಕಲಸ ಅರಸಿ, ಮಹಾರಾಷ್ಟ್ರದ ಇಸ್ಲಾಂಪುರಕ್ಕೆ ಗುಳೆ ಹೋಗಿ ಇಟ್ಟಿಗೆ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿತ್ತು. ಆ ಸಂದರ್ಭದಲ್ಲಿ ಈ ಕಟುಟುಂಬದ ಜೊತೆ ಪರಿಚಯ ಮಾಡಿಕೊಂಡ ರಾಹುಲ್ ಎಂಬಾತ, ಅಪ್ರಾಪ್ತೆಯ ಜೊತೆಗೂ ಸಲುಗೆಯಿಂದ ವರ್ತಿಸಿ ಮದುವೆಯಾಗುವುದಾಗಿ ಹೇಳಿಕೊಂಡು, ಅತ್ಯಾಚಾರ ನಡೆಸಿದ್ದಾನೆ ಎಂದು ದೂರು ದಾಖಲಾಗಿತ್ತು.
ಈ ಕುರಿತಂತೆ ತನಿಖೆ ನಡೆಸಿದ ದೇವರಹಿಪ್ಪರಗಿ ಠಾಣೆಯ ಪೊಲೀಸರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ರಾಹುಲ್‌ನನ್ನು ಅಪರಾಧಿ ಎಂದು ಪರಿಗಣಿಸಿ, 20 ವರ್ಷ ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.