ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಒಂದು ವರ್ಷ ಬಾಕಿ ಇರುವಾಗಲೇ ಬಿಜೆಪಿ ಪಕ್ಷ ಸಂಘಟನಾ ತಂತ್ರಗಾರಿಕೆಯಲ್ಲಿ ತೊಡಗಿದೆ. ದೇವನಹಳ್ಳಿಯಲ್ಲಿಂದು ನಡೆದ ಬೆಂಗಳೂರು ಗ್ರಾಮಾಂತರ ವಿಭಾಗ ಸಹಿತ ನಾಲ್ಕು ಜಿಲ್ಲೆಗಳ ಕಾರ್ಯಾಕಾರಿಣಿ ಸಮಾವೇಶ ಕುತೂಹಲದ ಕೇಂದ್ರಬಿಂದುವಾಯಿತು.
ದೇವನಹಳ್ಳಿ ಸಮೀಪದ ವಿಜಯಪುರ ಪಟ್ಟಣದಲ್ಲಿ ನಡೆದ ಸಮಾವೇಶದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್, ಸುಧಾಕರ್, ಎಂಟಿಬಿ ನಾಗರಾಜ್ ಸಹಿತ ಅನೇಕ ನಾಯಕರು ಭಾಗವಹಿಸಿದ್ದರು. ಸಮಾವೇಶದಲ್ಲಿ ಭಾಗವಹಿಸಿದ ಬಿಜೆಪಿ ನಾಯಕರು ಹಿಂದುತ್ವ ಪ್ರತಿಪಾದಿಸಿ ರಾಜ್ಯದ ಕೋಮು ಗಲಭೆಗಳ ಸಂಚಿನ ವಿರುದ್ದ ವಾಗ್ದಾಳಿ ನಡೆಸಿದರು.
ಬಿಜೆಪಿ ಕಟ್ಟಾಳು ಸಿ.ಟಿ.ರವಿ ರಾಜ್ಯದಲ್ಲಿ ತಮ್ಮದೇ ಶೈಲಿಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕೋಮು ಗಲಭೆ ಸೃಷ್ಟಿ ಮಾಡ್ತಿರುವ ಸಂಚುಗಾರರ ವಿರುದ್ದ ಹರಿಹಾಯ್ದರು. ಭಯೋತ್ಪಾದನೆ ಮಾಡುವವರಿಗೆ ಹಿಂದೆ ಬಿರಿಯಾನಿ ಕೊಡ್ತಿದ್ದರು. ಈಗ ನಾವು ಬಿರಿಯಾನಿ ತಿನಿಸಲ್ಲ. ಬಂದೂಕಿನಿಂದ ದಾಳಿ ಮಾಡುವವರಿಗೆ ಸೈನಿಕರ ಬಂದೂಕಿನಿಂದಲೇ ಉತ್ತರ ಕೊಡ್ತೀವಿ. ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಡ್ತೇವೆ ಎಂದರು. ಬಾಲ ಬಿಚ್ಚಿದ್ರೆ JCB ಬರುತ್ತೆ, ಬುಲ್ಡೋಜರ್ ಬರುತ್ತೆ ಎಂದು ರವಿ ಗುಡುಗಿದ ವೈಖರಿ ಕೂಡಾ ಗಮನಸೆಳೆಯಿತು.
ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಟಿ.ರವಿ, ಸಿದ್ದರಾಮಯ್ಯ ಅವರು ನಾನು ಹಿಂದೂ ಅಂತಾರೆ. ಕುಂಕುಮ ಇಡೋರನ್ನು ಕಂಡರೆ ಆಗಲ್ಲ ಅಂತಾರೆ. ಕೇಸರಿ ಟೋಪಿ ಹಾಕೋಕೆ ಬಂದಾಗ ಏನು ಮಾಡಿದ್ರು ಎಂದು ಪ್ರಶ್ನಿಸಿದರು. ನಮ್ಮ ತಾಯಂದಿರು ಕುಂಕಮ ಇಡ್ತಾರೋ ಇಲ್ವಾ.!? ಕುಂಕುಮ ಇಟ್ಟವರು ಯಾರಾದ್ರೂ ಬಾಂಬ್ ಹಾಕಿದ್ದಾರಾ..!? ಎನ್ನುತ್ತಾ ಕಾರ್ಯಕರ್ತರಿಂದ ಜೈಕಾರ ಗಿಟ್ಟಿಸಿಕೊಂಡರು.